ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷಣವೇ ರಾಷ್ಟ್ರೀಯ ಪಕ್ಷಗಳ ಸಾಧನೆ’

ಜೆಡಿಎಸ್‌ ಬೂತ್‌ ಮಟ್ಟದ ಕಾರ್ಯಕರ್ತರ ಸಭೆ
Last Updated 16 ಏಪ್ರಿಲ್ 2018, 8:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಭಾಷಣ ಮಾಡಿಕೊಂಡು ಕಾಲ ಕಳೆದಿದ್ದೇ ಇಷ್ಟು ವರ್ಷಗಳ ಸಾಧನೆಯಾಗಿದೆ. ಆದ್ದರಿಂದ ಈಗ ಬದಲಾವಣೆಯ ಅಗತ್ಯವಿದ್ದು, ಸೆಂಟ್ರಲ್‌ ಕ್ಷೇತ್ರದಲ್ಲಿ ರಾಜಣ್ಣ ಕೊರವಿ ಅವರನ್ನು ಗೆಲ್ಲಿಸಬೇಕು’ ಎಂದು ಜೆಡಿಎಸ್‌ ರಾಜ್ಯಘಟಕದ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಮನವಿ ಮಾಡಿದರು.

ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಭಾನುವಾರ ಮಳೆಯ ನಡುವೆ ನಡೆದ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ. ಐದು ವರ್ಷಗಳ ಆಡಳಿತದಲ್ಲಿ ಆ ಪಕ್ಷ ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ’ ಎಂದರು.

‘ಇಷ್ಟು ವರ್ಷ ರಾಜಕೀಯದಲ್ಲಿದ್ದರೂ ನಾನು ಏನೂ ಮಾಡಿಲ್ಲವೆಂದು ಇತ್ತೀಚಿಗೆ ಪ್ರದೀಪ್‌ ಶೆಟ್ಟರ್‌ ಟೀಕಿಸಿದ್ದರು. ಈ ಕ್ಷೇತ್ರದಲ್ಲಿ ಯಾರೂ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದೇನೆ. ಟೀಕಿಸುವವರು ತಾವೇನು ಮಾಡಿದ್ದಾರೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.

ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ ರಾಜಣ್ಣ ಕೊರವಿ ‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಶಿವಮೊಗ್ಗ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಮೈಸೂರು ಸಾಕಷ್ಟು ಅಭಿವೃದ್ಧಿಯಾಗುತ್ತವೆ. ಆದರೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದರೂ ಹುಬ್ಬಳ್ಳಿ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಮೂಲ ಸೌಕರ್ಯಗಳನ್ನು ದೊರಕಿಸಲು ವಿಫಲರಾಗಿದ್ದಾರೆ’ ಎಂದು ಟೀಕಿಸಿದರು.

‘ಶೆಟ್ಟರ್‌ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ದ್ವೇಷವಿಲ್ಲ. ಆದರೆ ಅಧಿಕಾರವಿದ್ದರೂ ಕ್ಷೇತ್ರದ ಜನರಿಗೆ  ಏನೂ ಮಾಡಿಲ್ಲ. ರಸ್ತೆ, ನೀರು ಸೇರಿದಂತೆ ಅನೇಕ ಸಮಸ್ಯೆಗಳಿದ್ದರೂ ಸ್ಪಂದಿಸಿಲ್ಲ. ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿತರಾಗಿ ಹೋರಾಟ ಮಾಡಬೇಕು. ಅದರಲ್ಲಿಯೂ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಮಾಡುವ ಕೆಲಸ ಪಕ್ಷದ ಶಕ್ತಿ ಹೆಚ್ಚಿಸುತ್ತದೆ’ ಎಂದರು.

ಚರ್ಚ್‌, ದೇವಸ್ಥಾನದಲ್ಲಿ ಜೆಡಿಎಸ್‌ ಪ್ರಚಾರ: ಜೆಡಿಎಸ್‌ ಮುಖಂಡರು ಭಾನುವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಗದಗ ರಸ್ತೆಯಲ್ಲಿರುವ ಸೇಂಟ್‌ ಪೀಟರ್ಸ್‌ ಚರ್ಚ್‌, ದಾಜಿಬಾನಪೇಟೆಯಲ್ಲಿರುವ ತುಳಜಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದರು.ನಂತರ ಟಿ.ಎ. ಶರವಣ ಅವರು ಸರಾಫ ಘಟ್ಟಿಯಲ್ಲಿ ಬೆಳ್ಳಿ ವರ್ತಕರು ಮತ್ತು ದುರ್ಗದ ಬೈಲ್‌ನಲ್ಲಿ ಚಿನ್ನ, ಬೆಳ್ಳಿ ವರ್ತಕರ ಜೊತೆ ಸಮಾಲೋಚನೆ ನಡೆಸಿದರು. ಕಂಚಗಾರ ಗಲ್ಲಿಯ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜದ ಮುಖಂಡರೊಂದಿಗೆ ಚರ್ಚಿಸಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಯಮಂತಿ ಅಣ್ಣಿಗೇರಿ, ಮೂರು ಸಾವಿರಪ್ಪ ಕೊರವಿ, ಅಲ್ತಾಫ್‌ ಕಿತ್ತೂರು, ಗಂಗಾಧರ ಪಾಟೀಲ ಕುಲಕರ್ಣಿ ಇದ್ದರು.

‘ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ’

ಹುಬ್ಬಳ್ಳಿ:  ‘ವಿಧಾನಸಭಾ ಚುನಾವಣಾ ಕುರಿತು ಇತ್ತೀಚಿಗೆ ಬಿಡುಗಡೆಯಾದ ಸಮೀಕ್ಷಾ ವರದಿಯ ಬಗ್ಗೆ ನಂಬಿಕೆಯಿಲ್ಲ, ರಾಜ್ಯದಲ್ಲಿ ಜೆಡಿಎಸ್‌ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ’ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಟಿ.ಎ. ಶರವಣ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜೆಡಿಎಸ್‌ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎನ್ನುವ ನಂಬಿಕೆ ಬಹಳಷ್ಟು ಜನರಲ್ಲಿದೆ. ಆದರೆ ಈ ಬಾರಿ ಮುಂಬೈ ಕರ್ನಾಟಕದಲ್ಲಿಯೂ ನಮ್ಮ ಪಕ್ಷ ಬಲಿಷ್ಠವಾಗಿದೆ. ಎಚ್‌.ಡಿ. ಕುಮಾರಸ್ವಾಮಿ ಅವರು ನಡೆಸುತ್ತಿರುವ ಕುಮಾರಪರ್ವ ಯಾತ್ರೆಗೆ ಜನ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ. ಹಿಂದೆ ಬಂದ ಅನೇಕ ಸಮೀಕ್ಷಾ ವರದಿಗಳು ಸುಳ್ಳಾಗಿವೆ’ ಎಂದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಮಹದಾಯಿ ವಿವಾದವನ್ನು ಪರಿಹರಿಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈಗ ರಾಜ್ಯದಲ್ಲಿ ಅಧಿಕಾರ ನೀಡಿದರೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಈ ಮಾತು ಹೇಳಲು ಅವರಿಗೆ ನಾಚಿಕೆಯಾಗಬೇಕು.  25 ವರ್ಷಗಳಲ್ಲಿ ಜಗದೀಶ ಶೆಟ್ಟರ್‌ ಊರಿನ ಅಭಿವೃದ್ಧಿ ಮಾಡದೇ, ತಮ್ಮ ಮನೆಯನ್ನು ಮಾತ್ರ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಸಂಸದ ಪ್ರಹ್ಲಾದ ಜೋಶಿ ಕೂಡ ಯಾವ ಕೆಲಸವನ್ನೂ ಮಾಡಿಲ್ಲ. ಇವರಿಗೆ ಜನರಲ್ಲಿ ಮತ ಕೇಳುವ ನೈತಿಕತೆ ಉಳಿದಿಲ್ಲ. ಪ್ರಾದೇಶಿಕ ಪಕ್ಷದಿಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ’ ಎಂದರು.

ಜೆಡಿಎಸ್‌ನಿಂದ ಅನೇಕರು ಹೊರಹೋಗುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ‘ಕೇಳಿದವರಿಗೆಲ್ಲಾ ಟಿಕೆಟ್‌ ಕೊಟ್ಟು ಎಲ್ಲರನ್ನೂ ಸಮಾಧಾನ ಪಡಿಸಲು ಆಗುವುದಿಲ್ಲ. ಅಧಿಕಾರ ಹಿಡಿಯಲು ಅಗತ್ಯವಿರುವ 113 ಸಂಖ್ಯೆಯ ಗುರಿ ಮುಟ್ಟುವುದು ನಮ್ಮ ಗುರಿ. ಇದಕ್ಕಾಗಿ ಗೆಲುವು ಪಡೆಯುವ ಅಭ್ಯರ್ಥಿಗೆ ಮಾತ್ರ ಟಿಕೆಟ್‌ ಕೊಡಲಾಗಿದೆ. ನಾವು ಕಿಂಗ್‌ಮೇಕರ್‌ ಆಗುವುದಿಲ್ಲ, ನಾವೇ ಕಿಂಗ್ ಆಗುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT