ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ನಿಲ್ಲದ ರಾಜಕಾಲುವೆ ಒತ್ತುವರಿ

Last Updated 2 ಡಿಸೆಂಬರ್ 2021, 4:57 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ಸಮಸ್ಯೆ ಮುಗಿಯದ ಕಥೆ. ನಗರದ ಜನರನ್ನು ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಮಳೆ ಬಂದಾಗ ಆಗುವ ಅನಾಹುತಗಳಿಗೆ ಕೊನೆ ಎಂಬುದೇ ಇಲ್ಲವಾಗಿದೆ.

ಇತ್ತೀಚೆಗೆ ಮಳೆ ಬಂದ ಸಮಯದಲ್ಲಿ ರಾಜಕಾಲುವೆಗಳು ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ತಗ್ಗು ಪ್ರದೇಶಗಳು, ಆರ್.ಟಿ.ನಗರ, ಕೋತಿತೋಪಿನ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿ ಜನರು ರಾತ್ರಿಪೂರಾ ನಿದ್ದೆ ಮಾಡದೆ ನೀರನ್ನು ಹೊರಕ್ಕೆ ಹಾಕಿದರು. ಸೋಮೇಶ್ವರಪುರಂನ ತಗ್ಗು ಪ್ರದೇಶಗಳು, ಕೋತಿತೋಪು, ಅಳಶೆಟ್ಟಿ ಕೆರೆಪಾಳ್ಯ, ಶಾಂತಿನಗರ, ಪೂರೌಸ್ ಕಾಲೊನಿ, ನಜರಾಬಾದ್, ಗೂಡ್‌ಶೆಡ್ ಕಾಲೊನಿ, ಕುರಿಪಾಳ್ಯ ಮೊತ್ತಿತರ ತಗ್ಗು ಪ್ರದೇಶಗಳಲ್ಲಿ ಅವಾಂತರಕ್ಕೆ ಕಾರಣವಾಗಿತ್ತು.

ಪ್ರಮುಖವಾಗಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದು, ಅದರ ಮೇಲೆ ಕಟ್ಟಡಗಳ ನಿರ್ಮಾಣಅವ್ಯಾಹತವಾಗಿ ಸಾಗಿದೆ. ಅದಕ್ಕಿಂತ ಮುಖ್ಯವಾಗಿ ಸಾಕಷ್ಟು ಕಡೆಗಳಲ್ಲಿ ಕಾಲುವೆಗಳೇ ಮುಚ್ಚಿ ಹೋಗಿದ್ದು, ಅಳಿದುಳಿದಿರುವ ಕಡೆಗಳಲ್ಲಿ ಹೂಳು ತುಂಬಿಕೊಂಡಿದೆ. ನಗರದಲ್ಲಿ ಎಲ್ಲಿ ರಾಜಕಾಲುವೆ ಹಾದುಹೋಗಿದೆ ಎಂದು ಹುಡುಕಬೇಕಿದೆ.

ಪೂರ್ಣ ಪ್ರಮಾಣದಲ್ಲಿ ಒತ್ತುವರಿ ತೆರವು ಮಾಡಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಪ್ರಭಾವ, ಒತ್ತಡಕ್ಕೆ ಮಣಿದಅಧಿಕಾರಿಗಳು ಸಹ ಕೆಲವು ಕಡೆಗಳಲ್ಲಿ ನೆಪಮಾತ್ರಕ್ಕೆ ತೆರವು ಮಾಡುತ್ತಾರೆ. ಪ್ರಭಾವಿಗಳು ನಿರ್ಮಿಸಿದ ಕಟ್ಟಡ, ಮಾಡಿಕೊಂಡ ಒತ್ತುವರಿ ತೆರವು ಸಾಧ್ಯವಾಗುತ್ತಿಲ್ಲ. ಹಾಗಾಗಿ ಒತ್ತುವರಿ ನಿರಾತಂಕವಾಗಿ ಸಾಗಿದ್ದು, ಮಳೆ ಬಂದ ಸಮಯದಲ್ಲಿ ಆಗುವ ಅನಾಹುತಗಳಿಗೆ ಕೊನೆ ಎಂಬುದೇ ಇಲ್ಲವಾಗಿದೆ.

ಮುಚ್ಚಿದ ರಾಜಕಾಲುವೆ: ನಗರದಲ್ಲಿ ಬಹುತೇಕ ರಾಜಕಾಲುಗಳು ಮುಚ್ಚಿ ಹೋಗಿವೆ, ಇಲ್ಲವೆ ಒತ್ತುವರಿಯಿಂದಾಗಿ ಚಿಕ್ಕದಾಗಿವೆ. ಇದ್ದರೂ ಹೂಳು ತುಂಬಿಕೊಂಡು, ಅದರ ಕುರುಹು ಹುಡುಕಬೇಕಿದೆ. ನಗರದಲ್ಲಿ ಎಷ್ಟು ಉದ್ದದ ರಾಜಕಾಲುವೆಗಳು ಇವೆ ಎಂಬುದು ಮಹಾನಗರ ಪಾಲಿಕೆ ಅಧಿಕಾರಿಗಳ ಬಳಿಯೂ ಮಾಹಿತಿ ಇಲ್ಲವಾಗಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 200 ಕಿಲೋ ಮೀಟರ್‌ಗಳಿಗೂ ಹೆಚ್ಚಿನ ಉದ್ದದ ಕಾಲುವೆಗಳು ಇರಬಹುದು ಎಂದು ಹೇಳಲಾಗುತ್ತಿದೆ. ಮಹಾನಗರ ಪಾಲಿಕೆಯಾಗಿ ರೂಪಾಂತರ ಹೊಂದಿದ ನಂತರ ನಗರದ ವಿಸ್ತಾರ, ಜನಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಈ ಸಂಖ್ಯೆ ಇನ್ನೂ ದೊಡ್ಡದು ಇರಬಹುದು ಎಂದು ಹೇಳಲಾಗುತ್ತಿದೆ.

ಈವರೆಗೆ ಪಾಲಿಕೆ ಅಧಿಕಾರಿಗಳು ಸರ್ವೆ ಮಾಡಿರುವುದು 25 ಕಿ.ಮೀ ಮಾತ್ರ. ಈ ಭಾಗದಲ್ಲಿ ಮಾಡಿಕೊಂಡಿದ್ದ ಒತ್ತುವರಿ ತೆರವುಮಾಡಿ, ಹೂಳು ತೆಗೆದು, ಗಿಡಗಂಟಿ ತೆಗೆಸಲಾಗಿದೆ. ಉಳಿದವುಗಳ ಸ್ಥಿತಿ ಏನಾಗಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಎಲ್ಲೆಲ್ಲಿ ಹಾದು ಹೋಗಿವೆ, ಎಲ್ಲಿ ಒತ್ತುವರಿಯಾಗಿವೆ ಎಂಬುದನ್ನೂ ಗುರುತಿಸಿಲ್ಲ. ರಾಜಕಾಲುವೆಗಳು ಸುಸ್ಥಿತಿಯಲ್ಲಿ ಇದ್ದರೆ ಮಳೆ ನೀರು ಸರಾಗವಾಗಿ ಹರಿದು ಕೆರೆ ಕಟ್ಟೆಗಳನ್ನು ಸೇರುತ್ತದೆ. ಅಂತರ್ಜಲದ ಹೆಚ್ಚಳಕ್ಕೂ ಸಹಕಾರಿಯಾಗುತ್ತದೆ. ಬಹುತೇಕ ಮಾರ್ಗಗಳು ಮುಚ್ಚಿರುವುದರಿಂದ ನೀರು ರಸ್ತೆ ಮೇಲೆ ಹರಿದು ರಸ್ತೆಗಳು ಸಹ ಹಾಳಾಗುತ್ತವೆ. ಇನ್ನೂ ಹೆಚ್ಚಾದರೆ ಮನೆಗಳಿಗೆ ನುಗ್ಗುತ್ತದೆ. ಜಲ ಮಾರ್ಗಗಳು ಇಲ್ಲದೆ ಕೆರೆಗಳೂ ಬರಿದಾಗುತ್ತಿವೆ. ಕೊನೆಗೆ ಕೆರೆ ಅಂಗಳ ಒತ್ತುವರಿಯಾಗಿ, ನಿಧಾನವಾಗಿ ಲೇಔಟ್‌ಗಳಾಗಿ ಪರಿವರ್ತನೆಯಾಗುತ್ತವೆ. ಇರುವ ಜಲಮೂಲಗಳನ್ನು ಕಳೆದುಕೊಂಡು ಜೀವ ಜಲಕ್ಕಾಗಿ ಕಣ್ಣುಬಾಯಿ ಬಿಡುವಂತಹ ಪರಿಸ್ಥಿತಿಯನ್ನು ನಾವೇ ತಂದುಕೊಳ್ಳುತ್ತಿದ್ದೇವೆ.

ಮುನ್ನೆಚ್ಚರಿಕೆ ಅಗತ್ಯ: ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುಗಳನ್ನು ಸರಿಪಡಿಸುವ ಕೆಲಸ ಯಾವ ವರ್ಷವೂ ಸಮರ್ಪಕವಾಗಿ ನಡೆಯುವುದಿಲ್ಲ. ಮುಂಗಾರಿಗೆ ಮೊದಲು ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆದು, ಒತ್ತುವರಿ ತೆರವು ಮಾಡಿ, ಅವುಗಳು ಕುಸಿಯದಂತೆ ಭದ್ರಪಡಿಸಿದರೆ ಮಳೆಗಾಲದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈವರೆಗೂ ಅಂತಹ ಪ್ರಯತ್ನವೇ ನಡೆದಿಲ್ಲ. ಈ ವಿಚಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕಂಡುಬರುವುದಿಲ್ಲ.

ಮಳೆಬಂದು ನೀರು ನುಗ್ಗಿ ಅನಾಹುತ ಸಂಭವಿಸಿದ ಸಮಯದಲ್ಲಿ ಮೈಕೊಡವಿಕೊಂಡು ತೆರವಿನ ಭರವಸೆ ನೀಡುತ್ತಾರೆ. ಮತ್ತೆ ಮಳೆ ಬಂದು ಅನಾಹುತ ಸಂಭವಿಸಿದಾಗ ಎಚ್ಚರವಾಗುತ್ತದೆ. ಆಗಲೂ ಅದೇ ಭರವಸೆ, ಹೇಳಿಕೆಗೆ ಸೀಮಿತವಾಗುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂಬುದು ಕೋತಿತೋಪು ಪ್ರದೇಶದ ನರಸಿಂಹಮೂರ್ತಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT