ಭಾನುವಾರ, ಮಾರ್ಚ್ 26, 2023
24 °C

ಕೆ.ಜಿಗೆ ₹100 ತಲುಪಿದ ಕ್ಯಾಪ್ಸಿಕಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತರಕಾರಿ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದರೂ, ಕೆಲವು ಮತ್ತೆ ದುಬಾರಿಯಾಗಿವೆ. ಕೊತ್ತಂಬರಿ ಸೊಪ್ಪು ಬಿಟ್ಟರೆ ಇತರೆ ಸೊಪ್ಪಿನ ಬೆಲೆ ಹೆಚ್ಚಳವಾಗಿದೆ. ಕೋಳಿ, ಮೀನು ಮತ್ತೆ ಏರಿಕೆಯಾಗಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಗೆಡ್ಡೆಕೋಸು ಕೆ.ಜಿ.ಗೆ ಮತ್ತೆ ₹10 ಹೆಚ್ಚಳವಾಗಿದ್ದು, ₹60–70ಕ್ಕೆ ತಲುಪಿದೆ. ಕ್ಯಾಪ್ಸಿಕಂ ಒಮ್ಮೆಲೆ ದುಪ್ಪಟ್ಟು ಏರಿಕೆಯಾಗಿದ್ದು, ಕೆ.ಜಿ 100ಕ್ಕೆ ತಲುಪಿದೆ. ಚಿಲ್ಲರೆಯಾಗಿ ₹120–140ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಹೂ ಕೋಸು ಒಂದಕ್ಕೆ ₹10 ದುಬಾರಿಯಾಗಿದ್ದು, ₹50ಕ್ಕೆ ಹೆಚ್ಚಳವಾಗಿದೆ. ಆವಕ ತೀವ್ರವಾಗಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಗಗನ ಮುಟ್ಟಿದ್ದ ಬೀನ್ಸ್, ಕ್ಯಾರೇಟ್ ಧಾರಣೆ ಇಳಿಕೆಯತ್ತ ಮುಖಮಾಡಿದ್ದು, ಬೀಟ್ರೂಟ್ ಅಲ್ಪ ಇಳಿಕೆಯಾಗಿದ್ದರೆ, ಟೊಮೆಟೊ, ಮೂಲಂಗಿ ಬೆಲೆ ಅಲ್ಪ ಹೆಚ್ಚಳವಾಗಿದೆ. ಕೊತ್ತಂಬರಿ ಸೊಪ್ಪು ಹೊರತುಪಡಿಸಿದರೆ ಇತರೆ ಸೊಪ್ಪಿನ ಬೆಲೆ ಏರಿಕೆ ಮುಂದುವರೆದಿದೆ. ಚಿಲ್ಲರೆ
ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳನ್ನು ಕೆ.ಜಿ.ಗೆ ₹80ರಿಂದ ₹100 ವರೆಗೆ ಮಾರಾಟ ಮಾಡಲಾಗುತ್ತಿದೆ.

ಕೊತ್ತಂಬರಿ ಸೊಪ್ಪು ಇಳಿಕೆಯತ್ತ ಮುಖ ಮಾಡಿದ್ದು, ಕೆ.ಜಿ ₹40–50ಕ್ಕೆ ಕಡಿಮೆಯಾಗಿದೆ. ಸಬ್ಬಕ್ಕಿ ಸೊಪ್ಪು ಕೆ.ಜಿ ₹40–50ಕ್ಕೆ ತಲುಪಿದೆ. ಪಾಲಕ್ ಸೊಪ್ಪು ಕೆ.ಜಿ ₹70ಕ್ಕೆ ಮಾರಾಟವಾಗಿದ್ದರೆ, ಮೆಂತ್ಯ ಸೊಪ್ಪು ಮತ್ತಷ್ಟು ದುಬಾರಿಯಾಗಿದ್ದು, ಕೆ.ಜಿ ₹100–120ಕ್ಕೆ ಏರಿಕೆ ಕಂಡಿದೆ. ಬಹುತೇಕ ಸೊಪ್ಪುಗಳು ಚಿಲ್ಲರೆಯಾಗಿ ಕೆ.ಜಿ ₹150ರ ದರದಲ್ಲಿ ಮಾರಾಟವಾಗುತ್ತಿವೆ. ಮಳೆಯಿಂದ ಸೊಪ್ಪು ಕೊಳೆತು ಹಾಳಾಗಿತ್ತು. ಈಗ ಮಳೆ ಇಲ್ಲದೆ ಶುಷ್ಕ ವಾತಾವರಣ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಳವಾಗಿ, ಬೆಲೆ ಇಳಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಧಾನ್ಯಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದ ಕಡಲೆ ಬೀಜದ ಬೆಲೆ ತುಸು ಹೆಚ್ಚಳವಾಗಿದೆ. ಅಲಸಂದೆ, ಬಟಾಣಿ ಅಲ್ಪ ದುಬಾರಿಯಾಗಿದ್ದರೆ, ತೊಗರಿ ಬೇಳೆ, ಉದ್ದಿನ ಬೇಳೆ, ಸಕ್ಕರೆ ಧಾರಣೆ ಅಲ್ಪ ಇಳಿಕೆಯಾಗಿದೆ. ಅಡುಗೆ ಎಣ್ಣೆ ಬೆಲೆ ಇಳಿಕೆಯತ್ತ ಹೆಜ್ಜೆ ಹಾಕುತ್ತಿದ್ದು, ಸನ್‌ಫ್ಲವರ್ ಕೆ.ಜಿ ₹140–145, ಪಾಮಾಯಿಲ್ ಕೆ.ಜಿ 125ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ದುಬಾರಿ: ಗೌರಿ, ಗಣೇಶ ಹಬ್ಬದ ನಂತರ ತೀವ್ರವಾಗಿ ಹೆಚ್ಚಳವಾಗಿದ್ದ ಕೋಳಿ ಮಾಂಸದ ಧಾರಣೆ ನಂತರ ಅಲ್ಪ ಇಳಕೆಯತ್ತ ಸಾಗಿತ್ತು. ಆದರೆ ಈಗ ಕಾರ್ತಿಕ ಮಾಸದಲ್ಲಿ ಏರಿಕೆ ದಾಖಲಿಸಿದೆ. ಈ ಸಮಯದಲ್ಲಿ ಕೆಲವರು ಮಾಂಸ ಸೇವನೆ ಮಾಡುವುದಿಲ್ಲ. ಇದರಿಂದ ಸಹಜವಾಗಿ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಸಲ ಕಾರ್ತಿಕ ಮಾಸದಲ್ಲೇ ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ 20 ಹೆಚ್ಚಳವಾಗಿದ್ದು, ₹160ಕ್ಕೆ, ರೆಡಿ ಚಿಕನ್ ₹230ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹135ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮೀನು ಬೆಲೆ: ಮೀನಿನ ಬೆಲೆ ಅಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಬಂಗುಡೆ ಕೆ.ಜಿ 220, ಬೂತಾಯಿ ಕೆ.ಜಿ ₹250, ಅಂಜಲ್ ₹710, ಬಿಳಿಮಾಂಜಿ ₹610, ಕಪ್ಪುಮಾಂಜಿ ₹430, ಬೊಳಿಂಜರ್ ಕೆ.ಜಿ ₹200, ಸೀಗಡಿ (ಟೈಗರ್) ಕೆ.ಜಿ 660ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು