ಗುರುವಾರ , ಸೆಪ್ಟೆಂಬರ್ 23, 2021
26 °C
ಏರುತ್ತಲೇ ಸಾಗಿದೆ ಅಡುಗೆ ಎಣ್ಣೆ ಬೆಲೆ

ಗಜ್ಜರಿ, ಸೊಪ್ಪು ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅಡುಗೆ ಎಣ್ಣೆ ಬೆಲೆ ಮತ್ತೆ ಏರಿಕೆ ಮುಂದುವರಿಸಿದ್ದರೆ, ಕ್ಯಾರೆಟ್ ದುಬಾರಿಯಾಗಿದ್ದು, ಇಳಿಕೆಯಾಗಿದ್ದ ಸೊಪ್ಪಿನ ಬೆಲೆ ಒಮ್ಮೆಲೆ ಹೆಚ್ಚಳ ಕಂಡಿದೆ. ಹಣ್ಣು, ಕೆಲ ತರಕಾರಿ ಬೆಲೆ ಏರುತ್ತಲೇ ಸಾಗಿದೆ. ಮೀನು ಧಾರಣೆ ಮತ್ತಷ್ಟು ಹೆಚ್ಚಳವಾಗಿದೆ.

ಸನ್‌ಫ್ಲವರ್ ಕೆ.ಜಿ ₹155ಕ್ಕೆ, ಪಾಮಾಯಿಲ್ ಕೆ.ಜಿ ₹127ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಕಳೆದ ಐದಾರು ತಿಂಗಳಿಂದ ಏರಿಕೆಯತ್ತಲೇ ದಾಪುಗಾಲು ಹಾಕಿದ್ದ ಎಣ್ಣೆ ಧಾರಣೆ, ಜೂನ್ ಕೊನೆ ಭಾಗದಲ್ಲಿ ಅಲ್ಪ ಇಳಿಕೆಯಾಗಿತ್ತು. ಈಗ ಮತ್ತೆ ಏರಿಕೆಯಾಗುತ್ತಲೇ ಇದೆ.
ತೊಗರಿ ಬೇಳೆ, ಉದ್ದಿನ ಬೇಳೆ, ಹುರಿಗಡಲೆ ಬೆಲೆ ಕೊಂಚ ಹೆಚ್ಚಳವಾಗಿದೆ.

ಕ್ಯಾರೆಟ್ ದುಬಾರಿ: ಕಳೆದ ಒಂದು ತಿಂಗಳಿಂದ ಗಗನಮುಖಿಯಾಗಿರುವ ಕ್ಯಾರೆಟ್, ಪ್ರಸ್ತುತ ಕೆ.ಜಿ ₹50–60ಕ್ಕೆ ಜಿಗಿದಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಈ ಬೆಲೆಗೆ ಮಾರಾಟವಾಗುತ್ತಿದ್ದು, ಚಿಲ್ಲರೆಯಾಗಿ ಕೆ.ಜಿ ₹80–100ಕ್ಕೆ ಮಾರಾಟ ಮಾಡಲಾಗುತ್ತಿದೆ. ಬೀನ್ಸ್ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ, ಹಸಿರು ಮೆಣಸಿನಕಾಯಿ ದರ ಕುಸಿದಿದೆ. ಸೌತೆಕಾಯಿ ಒಂದು ಕಾಯಿಗೆ ₹5–6ಕ್ಕೆ ಮಾರಾಟವಾಗುತ್ತಿದೆ.

ಸೇಬು, ದಾಳಿಂಬೆ ಬೆಲೆ ಅಲ್ಪ ತಗ್ಗಿದ್ದರೆ, ಏಲಕ್ಕಿ ಬಾಳೆ ಹಣ್ಣಿನ
ಬೆಲೆ ಹೆಚ್ಚಳವಾಗಿದೆ. ಇತರ
ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಕೋಳಿ ಇಳಿಕೆ: ಕೋಳಿ ಕೆ.ಜಿ ಬೆಲೆ ₹10 ಕಡಿಮೆಯಾಗಿದ್ದು, ಬ್ರಾಯ್ಲರ್ ಕೋಳಿ ಈ ವಾರ ಕೆ.ಜಿ ₹170ಕ್ಕೆ, ರೆಡಿ ಚಿಕನ್ ₹250ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮೀನು ಬೆಲೆ ಏರಿಕೆ: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಿದ್ದು, ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗಿದೆ. 
ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ಬಂಗುಡೆ ಕೆ.ಜಿ ₹380, ಬೂತಾಯಿ ಕೆ.ಜಿ ₹230, ಬಿಳಿಮಾಂಜಿ ಕೆ.ಜಿ
₹980, ಅಂಜಲ್ ಕೆ.ಜಿ ₹1,060, ಸೀಗಡಿ
ಕೆ.ಜಿ 550ಕ್ಕೆ ನಗರದ ಮತ್ಸ್ಯ ದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.