ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಯುವ ಕಾಂಗ್ರೆಸ್ ಘಟಕ ಉಪಾಧ್ಯಕ್ಷ ರಾಜೇಂದ್ರ ವಿರುದ್ಧ ದೋಷಾರೋ‍ಪ

ಪರಮೇಶ್ವರ ಹಠಾವೊ ಕಾಂಗ್ರೆಸ್ ಬಚಾವೊ ಘೋಷಣೆ ಭಿತ್ತಿ ಪತ್ರ ಅಂಟಿಸಿದ ಪ್ರಕರಣಕ್ಕೆ ಹೊಸ ತಿರುವು
Last Updated 22 ಜೂನ್ 2019, 19:32 IST
ಅಕ್ಷರ ಗಾತ್ರ

ತುಮಕೂರು: ‘ಪರಮೇಶ್ವರ ಹಠಾವೊ ಕಾಂಗ್ರೆಸ್ ಬಚಾವೊ’ ಎಂಬ ಘೋಷಣೆಯ ಭಿತ್ತಿಪತ್ರಗಳನ್ನು (ಪೋಸ್ಟರ್‌) ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 3ರಂದು ಇಬ್ಬರನ್ನು ಬಂಧಿಸಿದ್ದ ಪೊಲೀಸರು ಅವರ ಹೇಳಿಕೆ ಆಧರಿಸಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ರಾಜ್ಯ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಆರ್.ರಾಜೇಂದ್ರ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ವಕ್ತಾರ ರಾಜೇಶ್ ದೊಡ್ಡಮನಿ ವಿರುದ್ಧ ಪೊಲೀಸರು ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಮೇ 25ರಂದು ನಗರದ ಬಿ.ಎಚ್. ರಸ್ತೆಯ ಕೆಲ ಕಡೆ ಪರಮೇಶ್ವರ ಹಠಾವೊ ಕಾಂಗ್ರೆಸ್ ಬಚಾವೊ ಘೋಷಣೆ ಭಿತ್ತಿಪತ್ರಗಳನ್ನು( ಪೋಸ್ಟರ್) ಅಂಟಿಸಲಾಗಿತ್ತು. ಡಾ.ಪರಮೇಶ್ವರ ಅವರ ಭಾವಚಿತ್ರವೂ ಈ ಭಿತ್ತಿಪತ್ರದಲ್ಲಿತ್ತು. ಘೋಷಣೆಯ ಕೆಳಗಡೆ ಇಂತಿ ನೊಂದ ಕಾರ್ಯಕರ್ತರು, ತುಮಕೂರು ಜಿಲ್ಲೆ ಎಂದು ಇತ್ತು.

ಈ ಭಿತ್ತಿ ಪತ್ರ ಅಂಟಿಸಿದ್ದು ತಿಳಿಯುತ್ತಿದ್ದಂತೆಯೇ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಅವರು ಹೊಸ ಬಡಾವಣೆ ಠಾಣೆಗೆ ಮೇ 25ರಂದೇ ದೂರು ಸಲ್ಲಿಸಿದ್ದರು. ಇದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 3ರಂದು ನಗರದ ಜಯಪುರ ಬಡಾವಣೆಯ ನಿವಾಸಿ ಹಾಗೂ ಚಾಲಕ ವೃತ್ತಿಯಲ್ಲಿರುವ ಶಿವಪ್ರಸಾದ್, ಬಡ್ಡಿ ಹಳ್ಳಿ ನಿವಾಸಿ ಹಾಗೂ ಭಿತ್ತಿಪತ್ರ ಅಂಟಿಸುವ ಕೆಲಸಗಾರ ರವಿ ಹಾಗೂ ಮಂಜುನಾಥನಗರದ ನಿವಾಸಿ ಯತೀಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.

ವಿಚಾರಣೆ ವೇಳೆ ಈ ಆರೋಪಿಗಳು ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜೇಶ್ ದೊಡ್ಡಮನಿ ಅವರು ನಮಗೆ ಹಣ ನೀಡಿ ಭಿತ್ತಿಪತ್ರ ಅಂಟಿಸಲು ಹೇಳಿದ್ದರಿಂದ ಅಂಟಿಸಿರುವುದಾಗಿ ಹೇಳಿದ್ದರು. ಆರೋಪಿಗಳ ಹೇಳಿಕೆ ಆಧಾರದ ಮೇಲೆ ರಾಜೇಶ್ ದೊಡ್ಡಮನಿ ಅವರನ್ನು ಜೂನ್ 5ರಂದು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ಮಾಡಿದಾಗ ರಾಜೇಂದ್ರ ಅವರು ಬೆಂಗಳೂರಿನಿಂದ ಬಸ್‌ನಲ್ಲಿ ಇಟ್ಟು ತುಮಕೂರಿಗೆ ಕಳಿಸಿದ ಭಿತ್ತಿಪತ್ರಗಳನ್ನು ತೆಗೆದುಕೊಂಡು ಅಂಟಿಸಿದ್ದಾಗಿ ತಿಳಿಸಿದ್ದರು.

ರಾಜೇಶ್ ಹೇಳಿಕೆ ಆಧರಿಸಿ ರಾಜೇಂದ್ರ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ತಿಳಿಸಿದ್ದರು. ತನಿಖಾ ಕಾಲದಲ್ಲಿ ದೊರೆತಿರುವ ಸಾಕ್ಷಿಗಳ ಆಧಾರದ ಮೇಲೆ ಶಿವಪ್ರಸಾದ್, ಯತೀಶ್, ರಾಜೇಶ್ ದೊಡ್ಡಮನಿ, ರಾಜೇಂದ್ರ ಅವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT