ಸಹಬಾಳ್ವೆಯಿಂದ ದೇಶದ ಅಭಿವೃದ್ಧಿ

7
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ

ಸಹಬಾಳ್ವೆಯಿಂದ ದೇಶದ ಅಭಿವೃದ್ಧಿ

Published:
Updated:
Deccan Herald

ತುಮಕೂರು: ವಿವಿಧತೆಯಲ್ಲಿ ಏಕತೆಯ ಹಿರಿಮೆಯನ್ನು ನಮ್ಮ ದೇಶವು ಹೊಂದಿದೆ. ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು, ನೀಡಿದ ತತ್ವಾದರ್ಶಗಳನ್ನು ಪಾಲಿಸಬೇಕು. ಸಹಬಾಳ್ವೆಯಿಂದ ದೇಶದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಹೋರಾಟ, ತ್ಯಾಗ, ಬಲಿದಾನಗಳ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ. ವಿಶೇಷವಾಗಿ ದೇಶದಾದ್ಯಂತ ರಾಷ್ಟ್ರ ಪ್ರೇಮದ ಕಿಚ್ಚನ್ನು ಹೊತ್ತಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಅನುಸರಿಸಿದ ಅಹಿಂಸೆ ಮತ್ತು ಸತ್ಯಾಗ್ರಹ ಮಾರ್ಗಗಳು ಸ್ವಾತಂತ್ರ್ಯ ಹೋರಾಟದ ಜ್ವಾಲೆಯಾಗಿ ಪ್ರಜ್ವಲಿಸಿದವು ಎಂದರು.

ಮೈಸೂರು ಸಂಸ್ಥಾನಕ್ಕೆ ಸೇರಿದ್ದ ತುಮಕೂರು ಜಿಲ್ಲೆಯೂ ಸ್ವಾತಂತ್ರ್ಯ ಚಳವಳಿಯಲ್ಲೂ ಮುಂಚೂಣಿಯಲ್ಲಿತ್ತು. ಜಿಲ್ಲೆಯ ಡಿ.ಎಸ್.ಮಲ್ಲಪ್ಪನವರು, ತಾಳಕೆರೆ ಸುಬ್ರಹ್ಮಣ್ಯ, ಕೆ.ರಂಗಯ್ಯಂಗಾರ್, ಬಿ.ಸಿ.ನಂಜುಂಡಯ್ಯ, ಜಿಲ್ಲೆಯಲ್ಲಿ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿ ನಡೆಸಿದರು.

ಜಿಲ್ಲೆಗೆ ಮಹಾತ್ಮ ಗಾಂಧಿ ಬಂದಿದ್ದಾಗ ಅವರ ಭಾಷಣದಿಂದ ಪ್ರಭಾವಿತರಾಗಿ ಪಾವಗಡ ನಂಜುಂಡರಾವ್, ರತಂಗಪಾಣಿ, ನರಸಿಂಗರಾವ್ ಚಳವಳಿಗೆ ಧುಮುಕಿದರು ಎಂದು ವಿವರಿಸಿದರು.

ದಂಡಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ತುಮಕೂರಿನ ವೆಂಕಟರಾಮಯ್ಯ ಮತ್ತು ಎಲ್.ಕೃಷ್ಣಮೂರ್ತಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೇ ಅಂಕೋಲದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ತುಮಕೂರಿನ ಟಿ.ಎಲ್.ಸಂಗಣ್ಣ, ಟಿ.ಎಸ್.ಚೆನ್ನಪ್ಪ, ಪುಟ್ಟಯ್ಯ, ವಜ್ರಂಶೆಟ್ಟಿ ಸೇರಿ ಮೊದಲಾದವರು ಭಾಗವಹಿಸಿದ್ದು, ತುಮಕೂರಿನ ದೇಶಪ್ರೇಮವನ್ನು ತೋರಿಸುತ್ತದೆ ಎಂದು ಹೇಳಿದರು.

ಮಾಲಿ ಮರಿಯಪ್ಪ, ಟಿ.ಸಿದ್ಧಲಿಂಗಯ್ಯ, ಕೆ.ಹೆಂಜಾರೆಪ್ಪ, ತಾರೇಗೌಡ, ಕೆ.ನಂಜುಂಡರಾವ್, ವೆಂಕಟೇಶ್ ಗುಪ್ತ, ಮಲ್ಲಯ್ಯ, ಡಿ.ಎಸ್.ಮಲ್ಲಪ್ಪ ಅವರು ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಎಂ.ವಿ.ರಾಮರಾವ್, ಆರ್.ಎಸ್. ಆರಾಧ್ಯ, ಕೆ.ಎಸ್.ರಾಜಪ್ಪ, ಮಾರನಗೆರೆ ರಂಗಪ್ಪ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಕೆ.ಭೀಮಯ್ಯ, ರೇವಣ್ಣ, ಬಿ.ಸಿ.ನಂಜುಂಡಯ್ಯ, ಟಿ.ಪಿ.ಬ್ರಹ್ಮಯ್ಯ, ಭಾಗೀರಥಮ್ಮ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಹೋರಾಟಗಾರರನ್ನು ಭಾಷಣದುದ್ದಕ್ಕೂ ಸ್ಮರಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !