ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಯೋಜನೆ: ಸಂಸದರ ತುರ್ತು ಕ್ರಮ

ಸೆ.21ರಂದು ದಿಶಾ ಸಮಿತಿ ಸಭೆ ನಿಗದಿ, 41 ಯೋಜನೆಗಳ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಲು ಜಿ.ಪಂ. ಸಿಇಒ ಸೂಚನೆ
Last Updated 7 ಸೆಪ್ಟೆಂಬರ್ 2019, 7:34 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಸರ್ಕಾರದಿಂದ ಅನುಷ್ಠಾನವಾಗುತ್ತಿರುವ ವಿವಿಧ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ ಕುರಿತ ಪರಿಶೀಲನಾ ಸಮಿತಿ (ದಿಶಾ) ಸಭೆ ಸೆ.21ರಂದು ನಡೆಯಲಿದೆ.

ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ದಿಶಾ ಸಮಿತಿ ಕಾರ್ಯದರ್ಶಿ ಶುಭಾ ಕಲ್ಯಾಣ್ ಅವರು, ‘ದಿಶಾ’ ವ್ಯಾಪ್ತಿಗೆ ಬರುವ ಕೇಂದ್ರ ಸರ್ಕಾರದ 41 ಯೋಜನೆಗಳ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ದಿಶಾ ಸಮಿತಿ ಮಾರ್ಗದರ್ಶಿ ಸೂತ್ರದ ಪ್ರಕಾರ ದಿಶಾ ಸಮಿತಿ ವ್ಯಾಪ್ತಿಯ ನಿರ್ದಿಷ್ಟ ಯೋಜನೆಗಳಡಿ 30 ದಿನದಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಒಂದು ವೇಳೆ ವಿಳಂಬ ಮಾಡಿದರೆ 30 ದಿನಗಳೊಳಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಅಧಿಕಾರಿಗೆ ಅಧಿಕಾರವಿದ್ದು, ಈ ದಿಶೆಯಲ್ಲಿ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ, ಸಿದ್ಧತೆಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಆದೇಶಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ದಿಶಾ ಸಮಿತಿಗೆ ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷರಾಗಿದ್ದು, ಚಿತ್ರದುರ್ಗ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು ಉಪಾಧ್ಯಕ್ಷರಾಗಿರುತ್ತಾರೆ.

ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಒಂದೇ ಕಡೆ ಲಭ್ಯ ಇರುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ 17 ವಿಷಯಗಳನ್ನು ದಿಶಾ ಸಮಿತಿ ಅಜೆಂಡಾದಲ್ಲಿ ಸೇರಿಸಲು ಸಂಸದರು ದಿಶಾ ಸಮಿತಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ದಿಶಾ ಯೋಜನೆಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಇಲಾಖೆ ಕಚೇರಿಗಳ ಇತಿಹಾಸ ಒಳಗೊಂಡಂತೆ ಜಿ.ಐ.ಎಸ್. ಲೇಯರ್ ಸಿದ್ಧಪಡಿಸಲು ಮತ್ತು ಸ್ಮಾರ್ಟ್ ಕಚೇರಿಗಳಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 2019–20ರ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಪಡೆಯಬಹುದಾದ ಯೋಜನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಕುರಿತ ವಿಷಯ ಅಜೆಂಡಾದಲ್ಲಿ ಸೇರಿಸಲು ಸೂಚಿಸಿದ್ದಾರೆ.

ಅಲ್ಲದೇ, ಆಗಸ್ಟ್ 24ರಂದು ಮಧುಗಿರಿ ತಾಲ್ಲೂಕು ಬಡವನಹಳ್ಳಿಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದವರು ನಡೆಸಿದ ಜಲಶಕ್ತಿ ಸಮಾವೇಶದ ನಿರ್ಣಯಗಳನ್ನು ಸಭೆಯಲ್ಲಿಟ್ಟು ಅನುಮೋದನೆ ಪಡೆಯುವುದಕ್ಕೆ ಸೇರಿಸಿದ್ದಾರೆ.

ಅದೇ ರೀತಿ ಆಗಸ್ಟ್ 31ರಂದು ನಡೆದ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಡೆಸಿದ ಸ್ಕಿಲ್ ಪಾರ್ಕ್ ಸಭೆಯ ನಿರ್ಣಯಗಳನ್ನು ಸಭೆಯಲ್ಲಿಟ್ಟು ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಪತ್ರದಲ್ಲಿ ಸಂಸದರು ಸೂಚಿಸಿದ್ದಾರೆ.

ದಿಶಾ ಯೋಜನೆಗಳ ಸ್ಥಳ ಪರಿಶೀಲನೆ ಮತ್ತು ಜನರಿಗೆ ಅಭಿವೃದ್ಧಿ ಜಾಗೃತಿಗಾಗಿ ಮೊಬೈಲ್ ಹೈಟೆಕ್ ವಾಹನ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ.

ಎಚ್‌ಎಎಲ್ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸುವ ವೇಳೆಗೆ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ, ಶಂಕುಸ್ಥಾಪನೆ, ಉದ್ಘಾಟನೆಗೆ ಸಿದ್ಧಗೊಂಡಿರುವ ಯೋಜನೆಗಳು, ಪ್ರಗತಿಯಲ್ಲಿರುವ ಯೋಜನೆಗಳ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದ್ದಾರೆ. ಹೀಗಾಗಿ, ಸೆ.21ರಂದು ನಡೆಯಲಿರುವ ದಿಶಾ ಸಮಿತಿ ಸಭೆಯು ಮಹತ್ವದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT