ಆಸ್ತಿ ತೆರಿಗೆ ಪರಿಷ್ಕರಿಸಲು ಸಿಇಒ ಸೂಚನೆ

ಬುಧವಾರ, ಜೂಲೈ 17, 2019
24 °C

ಆಸ್ತಿ ತೆರಿಗೆ ಪರಿಷ್ಕರಿಸಲು ಸಿಇಒ ಸೂಚನೆ

Published:
Updated:

ತುಮಕೂರು: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಸೂಲಿ ಮಾಡುವ ಆಸ್ತಿ ತೆರಿಗೆಯನ್ನು ಪರಿಷ್ಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಅಂಗನವಾಡಿ ಕಟ್ಟಡ, ಶೌಚಾಲಯ ನಿರ್ಮಾಣ ಹಾಗೂ ದುರಸ್ತಿ’ಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಜುಲೈ ತಿಂಗಳಿನಲ್ಲಿ ಆಂದೋಲನದ ರೀತಿಯಲ್ಲಿ ಪ್ರಾರಂಭಿಸಬೇಕು. ಗ್ರಾಮ ವಿಕಾಸ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ 50 ಗ್ರಾಮಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಯೋಜಿಸಲಾಗಿದೆ. ಈಗಾಗಲೇ ಅನುಮೋದನೆಗೊಂಡಿರುವ 14 ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸಿ’ ಎಂದು ಅವರು ತಿಳಿಸಿದರು. 

ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅನುದಾನದಡಿ ಜಿಲ್ಲೆಯಲ್ಲಿ 450 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಮಂಜೂರಾತಿ ದೊರೆತಿದೆ. ಈ ಪೈಕಿ 208 ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡಿವೆ. ಉಳಿದ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಆಗಸ್ಟ್ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು. 

ದುರಸ್ತಿಗಾಗಿ ಗುರುತಿಸಲಾಗಿರುವ 337 ಅಂಗನವಾಡಿ ಶೌಚಾಲಯಗಳನ್ನು ಒಂದು ವಾರದೊಳಗೆ ಸರಿಪಡಿಸಬೇಕು. ಮಧುಗಿರಿ ತಾಲ್ಲೂಕಿನಲ್ಲಿ ಗುರುತಿಸಲಾಗಿರುವ 37 ಅಂಗನವಾಡಿ ಶೌಚಾಲಯಗಳ ದುರಸ್ತಿಗೆ ಅಂದಾಜು ವೆಚ್ಚಕ್ಕೆ ಅನುಗುಣವಾಗಿ ನಿಯಮಾನುಸಾರ ಕೂಡಲೇ ಟೆಂಡರ್ ಕರೆಯಿರಿ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣಪ್ಪ, ಯೋಜನಾ ನಿರ್ದೇಶಕ ಬಾಲರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !