ಸೋಮವಾರ, ಡಿಸೆಂಬರ್ 9, 2019
23 °C
ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ’ ಎಂಬ ವಿಷಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಹಿರಿಯ ಚಂಪಾ ಸಲಹೆ

ವ್ಯವಸ್ಥೆ ಸುಧಾರಣೆಗೆ ಬಂಡಾಯ ಹೋರಾಟವೇ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: ‘ಸಾಮಾಜಿಕ ಸಮಸ್ಯೆಗಳಿಗೆ ಬಂಡಾಯ ಸಾಹಿತ್ಯ ಸಂಘಟನೆ ಹೋರಾಟದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಕರೆ ನೀಡಿದರು.

ಬಂಡಾಯ ಸಾಹಿತ್ಯ ಸಂಘಟನೆಯು ಆಯೋಜಿಸಿದ ‘ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ’ ಎಂಬ ವಿಷಯ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಈಗಿನ ವ್ಯವಸ್ಥೆಯಲ್ಲಿ ಮನವಿ, ಭಿನ್ನವತ್ತಳೆ, ಅರ್ಜಿ, ಒಲೈಕೆ ಏನೂ ನಡೆಯುವುದಿಲ್ಲ. ಹಿಂದೆ ಮಾಡಿದ ರೀತಿಯೇ ಆ ಹೋರಾಟ, ಚಳವಳಿಗಳಿಂದಲೇ ಎಲ್ಲವನ್ನೂ ಪಡೆಯಬೇಕು’ ಎಂದು ಹೇಳಿದರು.

‘ಒಟ್ಟು ವ್ಯವಸ್ಥೆಯಲ್ಲಿ ನಾವೂ ಇದ್ದೇವೆ ಎಂಬುದನ್ನು ಮರೆಯಬಾರದು. ಮಾಧ್ಯಮ ಕ್ಷೇತ್ರವಷ್ಟೇ ಕೆಟ್ಟಿಲ್ಲ. ಇತರೆ ಎಲ್ಲ ಕ್ಷೇತ್ರಗಳೂ ಕೆಟ್ಟಿವೆ. ನಾವು ವಾಹನದಲ್ಲಿ ಹೋಗುವಾಗ ರಸ್ತೆಯಲ್ಲಿ ‘ಟ್ರಾಫಿಕ್ ಜಾಮ್’ ಆದರೆ ಅದಕ್ಕೆ ನಮ್ಮ ಪಾಲುದಾರಿಕೆಯೂ ಇರುತ್ತದೆ ಎಂಬುದನ್ನು ಮರೆಯಬಾರದು. ಕೆಟ್ಟು ಹೋದ ವ್ಯವಸ್ಥೆಯ ಬಗ್ಗೆ ಮಾತನಾಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಮಾತನಾಡಿ, ‘ಸರ್ಕಾರ, ಮಾಧ್ಯಮ ಹಾಗೂ ಸಾರ್ವಜನಿಕರ ತೆರಿಗೆ ಹಣ ಯಾವುದೇ ರೀತಿ ಒಂದಕ್ಕೊಂದು ಸಂಬಂಧವಿಲ್ಲ’ ಎಂದರು.

‘ಇದೊಂದು ವಿಚಿತ್ರ ಕ್ಷೇತ್ರವಾಗಿದೆ. ಮಾಧ್ಯಮ ಉದ್ಯಮವೂ ಆಗಿಲ್ಲ. ವೃತ್ತಿಯೂ ಆಗಿಲ್ಲ. ಹಾಗೆಯೇ ನಾವೆಲ್ಲ ವೈಭವಿಕರಿಸಿರುವಂತೆ ಸಂವಿಧಾನದ 4ನೇ ಅಂಗವೂ ಅಲ್’ಲ ಎಂದು ವಿಶ್ಲೇಷಿಸಿದರು.

‘ಜಗತ್ತಿನಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕನಿಷ್ಠ ಬೆಲೆಗೆ ಮಾರಾಟವಾಗುವ ಉತ್ಪನ್ನ ಎಂದರೆ ಪತ್ರಿಕೆಗಳು ಮಾತ್ರ. ಅದನ್ನು ಬಿಟ್ಟರೆ ನಮ್ಮ ರೈತರು ಬೆಳೆಯುವ ಕೃಷಿ ಉತ್ಪನ್ನಗಳು. ಸರ್ಕಾರ ಕೊಡುವ ಜಾಹೀರಾತುಗಳಿಂದಲೇ ಮಾಧ್ಯಮ ಕ್ಷೇತ್ರ ಉಸಿರಾಡುತ್ತಿದೆ ಎಂದರೆ ತಪ್ಪು. ಸರ್ಕಾರ ನಿಗದಿಪಡಿಸುವ ಜಾಹೀರಾತು ದರದಲ್ಲಿ ಮಾಧ್ಯಮ ಕ್ಷೇತ್ರ ಬದುಕುವುದು ಕಷ್ಟ. ಪರ್ಯಾಯ ಜಾಹೀರಾತು ಅವಲಂಬಿಸಲೇಬೇಕು’ ಎಂದು ಹೇಳಿದರು.

ಕವಿ ಕೆ.ಬಿ.ಸಿದ್ಧಯ್ಯ ಮಾತನಾಡಿ, ‘ಶ್ರೀಸಾಮಾನ್ಯನ ಎದೆಯ ದನಿಯಾಗಿ ಎಲ್ಲಿಯವರೆಗೂ ಕ್ರಿಯಾಶೀಲವಾಗಿರುತ್ತದೊ ಅಲ್ಲಿಯವರೆಗೆ ಬಂಡಾಯ ಸಂಘಟನೆ, ಚಳವಳಿ ತಣ್ಣಗಾಗುವುದಿಲ್ಲ’ ಎಂದು ನುಡಿದರು.

‘ಬಂಡಾಯ ಚಳವಳಿ, ಚಿಂತನೆಗಳು ಶ್ರೀಸಾಮಾನ್ಯನ ಎದೆಯಲ್ಲಿ ನಿತ್ಯ ಮಿಡಿಯುವಂತೆ ಮಾಡುವುದೇ ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಬಂಡಾಯ ಪ್ರಜ್ಞೆ ಮರು ಜಾಗೃತಗೊಳ್ಳಬೇಕು’ ಎಂದು ಹೇಳಿದರು.

ಎಸ್.ರಮೇಶ್, ಜಿ.ಎಸ್.ಸೋಮಶೇಖರ್ ಮಾತನಾಡಿದರು. ಬೂವನಹಳ್ಳಿ ನಾಗರಾಜ್  ವೇದಿಕೆಯಲ್ಲಿದ್ದರು. ರಾಮಕೃಷ್ಣ ಬೂದಿಹಾಳ ಸ್ವಾಗತಿಸಿದರು. ಭಕ್ತರಹಳ್ಳಿ ಕಾಮರಾಜ್ ನಿರೂಪಿಸಿದರು. ಎಚ್.ಆರ್.ದೇವರಾಜು ವಂದಿಸಿದರು.

ಪ್ರತಿಕ್ರಿಯಿಸಿ (+)