ತಿಪಟೂರು: ನಗರದ ತಾ.ಪಂ. ಸಭಾಂಗಣದಲ್ಲಿ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಜಲ ಜೀವನ್ ಮಷಿನ್ ಕಾಮಗಾರಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕೊಬ್ಬರಿ ಮಾರುಕಟ್ಟೆ ಕುರಿತು ಚರ್ಚೆಗಳು ನಡೆದವು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರವಾನೆದಾರರು ರೈತರಿಗೆ ಕೊಟ್ಯಂತರ ರೂಪಾಯಿ ಮೋಸ ಮಾಡಿ ಪರಾರಿಯಾಗುತ್ತಿದ್ದು, ಅಂತಹವರ ಪರವಾನಗಿ ರದ್ದುಪಡಿಸಿ ಶಿಸ್ತುಕ್ರಮ ಜರುಗಿಸಬೇಕು ಎಂದು ಕಾರ್ಯದರ್ಶಿ ನ್ಯಾಮೇಗೌಡರಿಗೆ ಶಾಸಕರು ಸೂಚಿಸಿದರು.
ಶಿಶು ಮತ್ತು ಮಕ್ಕಳ ಇಲಾಖೆಯಲ್ಲಿ ಮೇಲ್ವಿಚಾರಕರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಲೋಪ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ತಾ.ಪಂ ಇಒ ನ್ಯಾಕೇನಹಳ್ಳಿ, ನೊಣವಿನಕೆರೆ ಸೇರಿದಂತೆ ಅಂಗನವಾಡಿಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮಕ್ಕಳು ಕೇಂದ್ರದಲ್ಲಿ ಇಲ್ಲದಿದ್ದರೂ ಹಾಜರಾತಿಯಲ್ಲಿ ಮಾತ್ರ ಹೆಸರಿದೆ. ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಾಲ್ಲೂಕಿನಲ್ಲಿ ಶೇ 80ರಷ್ಟು ಜಲ ಜೀವನ್ ಯೋಜನೆ ಕಾಮಗಾರಿ ಉಳಿದಿದ್ದು, ಎಲ್ಲಲ್ಲಿ ಕಳಪೆ ಕಾಮಗಾರಿ ನೆಡಿದಿದೆ ಅಲ್ಲಿ ಪರಿಶೀಲಿಸಿ ಇಲಾಖೆಗೆ ಉತ್ತಮ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದರು
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶಕ್ಕಿಂತ ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕು. ಶಿಥಿಲಗೊಂಡಿರುವ ಶಾಲೆ ಕಟ್ಟಡಗಳ ಬಗ್ಗೆ, ಶೌಚಾಲಯಗಳ ಸ್ವಚ್ಛತೆ ಕಡೆ ಗಮನಹರಿಸಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿಗೆ ಶಾಸಕರು ಸೂಚಿಸಿದರು.
ಡಿಸೆಂಬರ್ ಅಂತ್ಯದೊಳಗೆ ತಾಲ್ಲೂಕಿನಲ್ಲಿ ಎತ್ತಿನಹೊಳೆ, ಹೇಮಾವತಿ ಹಾಗೂ ಸಣ್ಣ ನೀರಾವರಿ ಇಲಾಖೆಗಳಿಂದ ನೀರಾವರಿಯ ಎಲ್ಲ ಕಾಮಗಾರಿಗಳನ್ನು ಮುಗಿಸಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ಒತ್ತುವರಿಯಾಗಿರುವ ಅಚ್ಚುಕಟ್ಟು ಪ್ರದೇಶ ಹಾಗೂ ರಾಜಕಾಲುವೆಗಳನ್ನು ತೆರವುಗೊಳಿಸಬೇಕು ಎಂದು ಶಾಸಕ ಕೆ.ಷಡಕ್ಷರಿ ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕಿನಲ್ಲಿ ಈ ಬಾರಿ ಅತಿ ಹೆಚ್ಚು ರಾಗಿ ಬಿತ್ತನೆಯಾಗಿದೆ. ರೈತರಿಗೆ ಯಾವುದೇ ಸಮಯದಲ್ಲೂ ರಸಗೊಬ್ಬರ ಸಮಸ್ಯೆಯಾಗದಂತೆ ಎಚ್ಚರಿಕೆವಹಿಸಬೇಕು. ತೋಟಗಾರಿಕೆ ಇಲಾಖೆಯಿಂದ ಮಿಶ್ರ ಬೆಳೆ ಬೆಳೆಯಲು ಅವಕಾಶವಿದ್ದು, ಎಲ್ಲ ರೈತರಿಗೆ ಸಮರ್ಪಕ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ಸಾವಿರಾರು ಸಸಿಗಳನ್ನು ನೆಡೆಲಾಗುತ್ತಿದ್ದು, ಅದರ ರಕ್ಷಣೆ ಬಗ್ಗೆ ಗಮನಹರಿಸಬೇಕು. ಕಿಬ್ಬನಹಳ್ಳಿಯ ಕೋಣಕಾವಲಿನಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದ್ದು ಅಲ್ಲಿ ಗಿಡಗಳನ್ನು ನೆಡುವಂತೆ ತಿಳಿಸಿದರು.
ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ, ತಾ.ಪಂ ಇಒ ಸುದರ್ಶನ್, ತಹಶೀಲ್ದಾರ್ ಪವನ್‌ಕುಮಾರ್, ಪೌರಯುಕ್ತ ವಿಶ್ವೇಶ್ವರ ಬದರಗಡೆ, ನಗರಸಬೆ ಅದ್ಯಕೆ ಯಮುನಾ, ಕೃಷಿಕ ಸಮಾಜದ ಅಧ್ಯಕ್ಷ ಕೆರಗೊಡಿ ದೇವರಾಜ್, ತಾ.ಪಂ ಆಡಳಿತಾಧಿಕಾರಿ ಎಚ್.ಹುಲಿರಾಜ್, ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.