ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯವನ್ನು ಜಾತಿ ಮುಕ್ತವನ್ನಾಗಿಸಿ

ಪೆಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಪರಿವರ್ತನಾ ಕಾರ್ಯಕ್ರಮದಲ್ಲಿ ನಟ ಚೇತನ್ ಒತ್ತಾಯ
Last Updated 20 ಸೆಪ್ಟೆಂಬರ್ 2019, 5:59 IST
ಅಕ್ಷರ ಗಾತ್ರ

ಪಾವಗಡ: ರಾಜ್ಯವನ್ನು ಜಾತಿ ಮುಕ್ತವನ್ನಾಗಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ನಟ ಚೇತನ್ ಅಹಿಂಸಾ ಒತ್ತಾಯಿಸಿದರು.

ತಾಲ್ಲೂಕಿನ ಪೆಮ್ಮನಹಳ್ಳಿಯಲ್ಲಿ ಗುರುವಾರ ಯುವ ಕರ್ನಾಟಕ ಆಯೋಜಿಸಿದ್ದ ಪರಿವರ್ತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಾತಿ ವ್ಯವಸ್ಥೆ ವಿರುದ್ಧ ಮಾತನಾಡುತ್ತಾರೆ. ಜಾತಿ ವ್ಯವಸ್ಥೆಯನ್ನು ಹತ್ತಿಕ್ಕಿ, ರಾಜ್ಯವನ್ನು ಜಾತಿ ಮುಕ್ತವನ್ನಾಗಿಸಿದರೆ, ನಿಜವಾಗಲೂ ಅವರ ಹೃದಯದಲ್ಲಿ ಬಸವಣ್ಣನವರು ಇದ್ದಾರೆ ಎಂಬುದು ತಿಳಿಯುತ್ತದೆ. ಅವರ ಮಾತುಗಳ ಬಗ್ಗೆ ಗೌರವ ಮೂಡುತ್ತದೆ ಎಂದರು.

ಕಾಡುಗೊಲ್ಲರು, ದಲಿತರು ನಾಗ ಪರಂಪರೆಯಿಂದ ಬಂದವರು. ದೇಶದ ಮೂಲ ನಿವಾಸಿಗಳು, ದೇಶದ ವೈವಿಧ್ಯತೆ ಉಳಿಸುತ್ತಿರುವ ಸಮುದಾಯಗಳು. ಸಮಾಜದ ವ್ಯವಸ್ಥೆಯಲ್ಲಿ, ತಾರತಮ್ಯ ಭಾವದ ಚೌಕಟ್ಟಿನಲ್ಲಿ ಸಮಸ್ಯೆಯಿದೆ. ಎಲ್ಲರೂ ಸೇರಿ ಬದಲಾವಣೆ ಮಾಡಬೇಕು ಎಂದರು.

ಸರ್ಕಾರ ಕಾಡುಗೊಲ್ಲರಿಗೆ ಸೌಕರ್ಯ ಕಲ್ಪಿಸಿಲ್ಲ. ಮನೆ, ಉದ್ಯೋಗ ಕಲ್ಪಿಸಿಲ್ಲ. ಮೌಢ್ಯ, ಭಯದ ವಾತಾವರಣ ಹೋಗಲಾಡಿಸುವ, ಅರಿವು ಮೂಡಿಸುವ ಪ್ರಯತ್ನ ಮಾಡಿಲ್ಲ. ಸಂಸದರು, ಜನಪ್ರತಿನಿಧಿಗಳಿಗೆ ಬದಲಾವಣೆ ಮಾಡಬೇಕು ಎಂಬ ಯೋಚನೆ ಇದೆಯಾ? ಜಾತಿ ವ್ಯವಸ್ಥೆ ಬಲಪಡಿಸಬೇಕು ಎಂಬ ಆಲೋಚನೆ ಇದೆಯಾ? ಒಂದು ವೇಳೆ ಬದಲಾವಣೆ ತರುವ ಯೋಚನೆ ಇದ್ದರೆ ಹಟ್ಟಿಗಳ ಅಭಿವೃದ್ಧಿಯತ್ತ ಗಮನ ಹರಿಸಿ, ಅರಿವು ಮುಡಿಸುವ ಕೆಲಸವಾಗಬೇಕು ಎಂದರು.

ಲೇಖಕ ವಡ್ಡಗೆರೆ ನಾಗರಾಜಯ್ಯ, ಕಾಡುಗೊಲ್ಲರು, ಮಾದಿಗರೊಂದಿಗೆ ಕರುಳಬಳ್ಳಿ ರಕ್ತ ಸಂಬಂಧ ಹೊಂದಿರುವ ಜನಾಂಗ. ಬ್ರಾಹ್ಮಣ ಆಚಾರ, ವಿಚಾರಗಳನ್ನು ದೂರವಿಟ್ಟು ಬುಡಕಟ್ಟು ದೈವಾರಾಧನೆ ಮಾಡಿಕೊಂಡು ಬಂದ ಜನಾಂಗ. ಮಾದಿಗರು, ಕಾಡುಗೊಲ್ಲರು ಅಣ್ಣ ತಮ್ಮಂದಿರು ಎಂಬುದಕ್ಕೆ ಕರಡಿ ಬುಳ್ಳಪ್ಪ, ಕಾಟವ್ವ, ಕೃಷ್ಣ, ಜಾಂಬವಂತನ ಕಥೆ ನಿದರ್ಶನ. ಜಾಂಬವಂತ ಎಂದರೆ ಮಾದಿಗರು ಎಂದರು.

ಕಾಡುಗೊಲ್ಲರ ಅಧ್ಯಯನಕಾರ ಜಯರಾಂ ಮಾತನಾಡಿ, ಕಾಡುಗೊಲ್ಲರು ಮಾದಿಗರೊಂದಿಗೆ ಅನ್ಯೋನ್ಯತೆಯಿಂದ ಇದ್ದಾರೆ. ಯಾದವರೇ ಕಾಡುಗೊಲ್ಲರಿಗೆ ನಿಜವಾದ ಶತ್ರುಗಳು. ಎ.ಕೃಷ್ಣಪ್ಪ, ಅವರ ಮಗಳು ಪೂರ್ಣಿಮಾ ಕಾಡುಗೊಲ್ಲರನ್ನು ಬಳಸಿಕೊಂಡಿದ್ದಾರೆ. ಕಾಡುಗೊಲ್ಲ ಮೀಸಲಾತಿ ಹೋರಾಟ ಸಮಿತಿ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಕಾಡುಗೊಲ್ಲರನ್ನು ಮತ ಹಾಕುವ ಸ್ಟಾಂಪ್‌ಗಳಂತೆ ಕಾಣಲಾಗುತ್ತಿದೆ ಎಂದು ಆರೋಪಿಸಿದರು.

2008ರಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಎ.ನಾರಾಯಣಸ್ವಾಮಿ ಅವರು ಕಾಡುಗೊಲ್ಲ ಜನಾಂಗದ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸು ಮಾಡಿದ್ದರು. ಅವರ ಋಣ ಕಾಡುಗೊಲ್ಲ ಜನಾಂಗದವರ ಮೇಲಿದೆ. ಆದರೆ ಯಾದವ ಸ್ವಾಮೀಜಿ, ಪೂರ್ಣಿಮಾ ಹಟ್ಟಿಗೆ ಬರುವ ಪ್ರಯತ್ನ ಮಾಡಬಾರದು ಎಂದರು.

ಕುಣಿಗಲ್ ಕಾಡುಗೊಲ್ಲ ಅಸ್ಮಿತೆ ಸಮಿತಿ ಸಂಚಾಲಕ ನಾಗಣ್ಣ, ಸಾಹಿತಿ ಲಿಂಗಣ್ಣ ಜಂಗಮರಹಳ್ಳಿ ಮಾತನಾಡಿದರು. ಭೀಮ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ಸಂಪತ್ ಸುಬ್ಬಯ್ಯ, ಮುಖಂಡ ಸಿ.ಎಸ್.ಮೋಹನ್, ಸಿ.ಕೆ.ತಿಪ್ಪೇಸ್ವಾಮಿ, ಪೆದ್ದಣ್ಣ, ರಮೇಶ್, ರಘುನಂದನ್, ಕೆಂಚರಾಯ, ಮಣಿ ಉಪಸ್ಥಿತರಿದ್ದರು.

ಕಾಡುಗೊಲ್ಲರಿಗೆ ದಲಿತ ಚಳವಳಿ ಸ್ಪರ್ಶ ಸಿಕ್ಕಿದ್ದರೆ ನಾಗರಿಕ ಬದುಕು ಸಿಗುತ್ತಿತ್ತು. ಆಳಿದವರು ಕಾಡುಗೊಲ್ಲರ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ ಕಳ್ಳೆ ಬೇಲಿ ಗುಡಿಸಲುಗಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

- ವಡ್ಡಗೆರೆ ನಾಗರಾಜಯ್ಯ, ಲೇಖಕ

ಸಂಸದರು ಶಿಷ್ಟಾಚಾರ ಪಾಲಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಎಲ್ಲರೂ ಕೆಲಸಕ್ಕೆ ಹೋಗಿದ್ದಾಗ ಹಟ್ಟಿಯಲ್ಲಿ ಅನಕ್ಷರಸ್ಥರು, ವೃದ್ಧರು ಇರುತ್ತಾರೆ. ಅಂತಹ ವೇಳೆ ಅವರನ್ನು ಯಾರು ಎಂದು ಪ್ರಶ್ನಿಸಿದ್ದಾರೆ. ಇದು ಇಷ್ಟೆಲ್ಲ ಅನಾಹುತಗಳಿಗೆ ಕಾರಣ.

- ಜಯರಾಂ, ಕಾಡುಗೊಲ್ಲ ಸಮುದಾಯ ಅಧ್ಯಯನಕಾರ

ಕಾಡುಗೊಲ್ಲರಿಗೆ ಅಗತ್ಯ ಸೌಕರ್ಯ ಕಲ್ಪಿಸುವತ್ತ ಸರ್ಕಾರ, ಜನಪ್ರತಿನಿಧಿಗಳು ಗಮನಹರಿಸಬೇಕು. ಬುದ್ಧ, ಬಸವ, ಪೆರಿಯಾರ್, ಕುವೆಂಪು ಸಿದ್ಧಾಂತದಂತೆ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಬೇಕು.

ಚೇತನ್ ಅಹಿಂಸಾ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT