ಸೋಮವಾರ, ಫೆಬ್ರವರಿ 17, 2020
16 °C
53 ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

ಪರಿತ್ಯಕ್ತ ಮಕ್ಕಳ ದತ್ತು; ತುಮಕೂರು ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಾನೂನು ಬದ್ಧ ದತ್ತು ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನದ ವಿಚಾರವಾಗಿ ತುಮಕೂರು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.

2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಪರಿತ್ಯಕ್ತ/ಒಪ್ಪಿಸಲ್ಪಟ್ಟ 30 ಮಕ್ಕಳು ದೊರೆತಿವೆ. 2019-20ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಪರಿತ್ಯಕ್ತ/ಒಪ್ಪಿಸಲ್ಪಟ್ಟ 23 ಮಕ್ಕಳು ದೊರೆತಿವೆ. ಈ ಒಟ್ಟು 53 ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಿದ ಹಿರಿಮೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಸಿಬ್ಬಂದಿಗೆ ಸಂದಿದೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಹಾಗೂ ಸಿಬ್ಬಂದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‍ಸಿಂಗ್ ಅಭಿನಂದಿಸಿದ್ದಾರೆ.

‘ಜಿಲ್ಲೆಯ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪೊಲೀಸರು, ಸಾರ್ವಜನಿಕರು ಹೀಗೆ ಎಲ್ಲರ ಸಹಕಾರದಿಂದ ದತ್ತು ಪ್ರಕ್ರಿಯೆಯಲ್ಲಿ ಜಿಲ್ಲೆ ಮುಂದಿದೆ’ ಎಂದು ವಾಸಂತಿ ಉಪ್ಪಾರ್ ತಿಳಿಸಿದರು.

‘ಎಷ್ಟೇ ದೂರದಲ್ಲಿ ಪರಿತ್ಯಕ್ತ ಮಗು ದೊರೆದರೂ ಆಂಬುಲೆನ್ಸ್ ಕಳುಹಿಸಿ ಆರೋಗ್ಯ ಇಲಾಖೆ ಸಹಕಾರ ನೀಡುತ್ತಿದೆ. ಪೊಲೀಸರು ಸಹ ಈ ವಿಚಾರದಲ್ಲಿ ಸ್ಪಂದಿಸುತ್ತಿದ್ದಾರೆ. ಅಪಾಯಕಾರಿ ಜಾಗದಲ್ಲಿ ಮಗುವನ್ನು ಬಿಟ್ಟು ಹೋಗಿದ್ದರೂ ಎಷ್ಟೇ ಸಮಯವಾದರೂ ಮಗುವನ್ನು ರಕ್ಷಿಸಿದ್ದೇವೆ’ ಎಂದರು.

ನೋವಿನ ಸಂಗತಿ

ಪರಿತ್ಯಕ್ತ ಮಕ್ಕಳ ದತ್ತು ವಿಚಾರದಲ್ಲಿ ತುಮಕೂರು ಮೊದಲ ಸ್ಥಾನದಲ್ಲಿದೆ. ಇದಕ್ಕಾಗಿ ಇಲಾಖೆಗೆ ಅಭಿನಂದನೆ ಸಹ ದೊರೆತಿದೆ. ಆದರೆ ನಿಜಕ್ಕೂ ಮಕ್ಕಳನ್ನು ಪೋಷಕರು ತೊರೆಯುವುದು ನೋವಿನ ವಿಚಾರ ಎಂದು ವಾಸಂತಿ ಉಪ್ಪಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೋಷಕರು ಮಕ್ಕಳಿಂದ ದೂರ ಆಗಬಾರದು. ಇಂತಹ ಬೆಳವಣಿಗೆಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)