ಮಂಗಳವಾರ, ಮಾರ್ಚ್ 28, 2023
22 °C

ತುಮಕೂರು: ರೈತರ ಹೋರಾಟ ನಿರ್ಲಕ್ಷ್ಯಕ್ಕೆ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ವರ್ಷದಿಂದ ರೈತರು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಸಮಾಧಾನ ವ್ಯಕ್ತಪಡಿಸಿದರು.

ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ವತಿಯಿಂದ ‘ಕಾಡುವ ಕೆ.ಬಿಯ ನೆನಪು’ ಕಾರ್ಯಕ್ರಮದಡಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ‘ಜನಪರ ಚಳವಳಿಗಳ ದಿಕ್ಕು– ದೆಸೆ’ ಕುರಿತು ಮಾತನಾಡಿದರು.

ರೈತರ ಹೋರಾಟವನ್ನು ಸರ್ಕಾರ ನಿರ್ಲಕ್ಷ್ಯಿಸಿದ್ದು, ಕೆಲ ಸಮಯದ ನಂತರ ಜನರ ಮನಸ್ಸಿನಿಂದಲೂ ಕಣ್ಮರೆಯಾಗುವ ಅಪಾಯವಿದೆ. ಈ ಎಚ್ಚರ ಎಲ್ಲರಿಗೂ ಅಗತ್ಯ ಎಂದು ಹೇಳಿದರು.

ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಮುಂದಿರುವ ಪ್ರಶ್ನೆಗಳೇ ದಲಿತರ ಮುಂದೆಯೂ ಇವೆ. ಅಸಮಾನತೆಯ ವೈರುಧ್ಯದ ಸಮಾಜದಲ್ಲಿ ಪ್ರಜಾಪ್ರಭುತ್ವದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ರೈತರ ಹೋರಾಟದ ನಡುವೆಯೂ ಬಿಜೆಪಿ ಯಾಕಿಷ್ಟು ನಿರಾಳವಾಗಿದೆ ಎಂದರೆ, ಕೃಷಿ ಕಾರ್ಮಿಕರು ಹಾಗೂ ಭೂ ರಹಿತರನ್ನು ದಿಕ್ಕು ತಪ್ಪಿಸುತ್ತಿದೆ. ಈ ವರ್ಗಗಳು ಕೃಷಿ ಕಾಯ್ದೆಯಿಂದ ನಮಗೆ ಆಗಬೇಕಾದ್ದೂ ಏನು ಇಲ್ಲ ಎಂಬ ಮನೋಭಾವ ತಾಳಿವೆ. ರೈತರ ಹೋರಾಟದ ಭಾಗವಾಗದೇ ದೂರ ಉಳಿಯುವಂತೆ ಮಾಡಿರುವ ತಂತ್ರಗಾರಿಕೆಯಿಂದ ಬಿಜೆಪಿ ನಿರಾಳವಾಗಿದೆ ಎಂದು ತಿಳಿಸಿದರು.

‘ಇದು ಚಳವಳಿಗಳ ಬರದ ಯುಗ. ನಾನು ಮತ್ತು ನಮ್ಮ ವಯಸ್ಸಿನ ಬಹಳಷ್ಟು ಜನ 80ರ ದಶಕದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಜನಪರ ಚಳವಳಿಗಳಿಂದ ರೂಪುಗೊಂಡಿದ್ದೇವೆ. ಸಾಮಾಜ ಚಳವಳಿಗೆ ಸಿದ್ಧವಿದ್ದು, ಅದಕ್ಕೆ ಕಿಡಿ ಹೊತ್ತಿಕೊಳ್ಳುತ್ತಿಲ್ಲ. ಯಾವುದೋ ಒಂದು ಕಡೆ ಕಿಡಿ ಹೊತ್ತಿಕೊಂಡು ಅದಕ್ಕೆ ಸಮಾಜ ಪ್ರತಿಕ್ರಿಯಿಸಿದರೆ ಚಳವಳಿ ರೂಪುಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಾನು ಹೋರಾಟಗಾರನಲ್ಲ. ಯಾವುದೇ ಚಳವಳಿಯಲ್ಲೂ ಭಾಗವಹಿಸಿದವನಲ್ಲ. ಅನಿವಾರ್ಯದ ಒತ್ತಡದ ನಡುವೆ ಪತ್ರಕರ್ತನಾಗಿ ಕೆಲಸ ಮಾಡಿದ್ದೇನೆ. ಚಳವಳಿ ಮುನ್ನಡೆಸುತ್ತಿದ್ದ ನಾಯಕನೊಬ್ಬ ದಿಢೀರ್ ಕಣ್ಮರೆಯಾದ ಬಳಿಕ ಪರ್ಯಾಯ ನಾಯಕತ್ವ ಸೃಷ್ಟಿ
ಯಾಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಪರ್ಯಾಯ ನಾಯಕತ್ವವು ರಸ್ತೆ, ಸೇತುವೆ ಕಾಮಗಾರಿಯ ನಿರ್ಮಾಣದಂತೆ ಇಂತಿಷ್ಟೆ ಅವಧಿಗೆ ಪೂರ್ಣಗೊಳ್ಳಬೇಕು ಎಂಬಂತೆ ಆಗುವುದಲ್ಲ. ಅದಕ್ಕೆ ಸೂಕ್ತ ಸಮಯ, ಕಾಲ, ಪರಿಸರ ಬೇಕಾಗುತ್ತದೆ ಎಂದರು.

ಲೇಖಕ ಕೆ.ಪಿ.ನಟರಾಜು, ಚಿಂತಕ ಕೆ.ದೊರೈರಾಜು, ಟ್ರಸ್ಟ್ ಅಧ್ಯಕ್ಷ ಎ.ರಾಮಚಂದ್ರ, ಮುಖಂಡರಾದ ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಉಪಸ್ಥಿತರಿದ್ದರು. ಕೊಟ್ಟಶಂಕರ್ ಸ್ವಾಗತಿಸಿದರು. ಡಾ.ಮಂಜುನಾಥ್ ವಂದಿಸಿದರು. ತಿಮ್ಲಾಪುರ ಶಿವಣ್ಣ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು