ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಂತಿಯುತ ಮತದಾನಕ್ಕೆ ಸಹಕರಿಸಿ’

ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮನವಿ
Last Updated 6 ಏಪ್ರಿಲ್ 2018, 10:32 IST
ಅಕ್ಷರ ಗಾತ್ರ

ಸಿಂಧನೂರು: ‘ಮೇ.12 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಕೊಡದೆ ಶಾಂತಿಯುತವಾಗಿ ಮತದಾನ ನಡೆಯಲು ಎಲ್ಲ ರಾಜಕೀಯ ಪಕ್ಷದ ಮುಖಂಡರು ಸಹಕರಿಸಬೇಕು’ ಎಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮನವಿ ಮಾಡಿದರು.ಇಲ್ಲಿಯ ಮಿನಿವಿಧಾನಸೌಧ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಪಕ್ಷಗಳ ಮುಖಂಡರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕ್ಷೇತ್ರವೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ₹10 ಸಾವಿರ  ನಗದು ಪಾವತಿಸಿ ರಸೀದಿ ಪಡೆಯಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರದೊಂದಿಗೆ ₹5 ಸಾವಿರ  ಪಾವತಿ ಮಾಡಬೇಕು’ ಎಂದು ತಿಳಿಸಿದರು.

‘ಭಾಷೆ, ಧರ್ಮದ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಬಾರದು.ಮಠ, ಮಂದಿರ, ಚರ್ಚ್, ಧಾರ್ಮಿಕ ಸ್ಥಳಗಳಲ್ಲಿ ಮತದಾರರಿಗೆ ಆಮಿಷ ಒಡ್ಡುವಂತಿಲ್ಲ.ಅನ್ಯ ಪಕ್ಷದ ಅಭ್ಯರ್ಥಿ ವಿರುದ್ಧ ನಕರಾತ್ಮಕ ಪ್ರಚಾರ ಮಾಡುವಂತಿಲ್ಲ. ಮೆರವಣಿಗೆ ಮತ್ತು ಸಭೆಗಳಿಗೆ ಪೊಲೀಸ್ ಮತ್ತು ಕಂದಾಯ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಚುನಾವಣೆಗೆ ಬಳಸುವ ವಾಹನಗಳಿಗೆ ಆರ್‌ಟಿಒ ಅನುಮತಿ ಕಡ್ಡಾಯ’ ಎಂದು ಮಾಹಿತಿ ನೀಡಿದರು.

‘ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಒಬ್ಬರು ಸೂಚಕರು ಇರಬೇಕು.ಆದರೆ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದಾಗ ಹತ್ತು ಜನ ಸೂಚಕರಿರಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಭ್ಯರ್ಥಿಗಳು ಬ್ಯಾಂಕ್ ಖಾತೆ ತೆರೆದು ಚುನಾವಣಾ ಖರ್ಚು, ವೆಚ್ಚಗಳನ್ನು ಆ ಖಾತೆ ಮುಖಾಂತರ ನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಏಪ್ರಿಲ್ 13 ರೊಳಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ’ ಎಂದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ಧಡೇಸೂಗೂರು ಅವರು , ‘ಕೆಲವರು ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳುವಿರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ, ‘ಅಂತಹ ಪ್ರಕರಣ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಎರಡು ಗುರುತಿನ ಚೀಟಿ ಹೊಂದಬಾರದು. ಎರಡು ಕಡೆ ಮತದಾನಕ್ಕೂ ಅವಕಾಶ ಇಲ್ಲ. ಎಲ್ಲಾ ಪಕ್ಷದವರು ಈ ಬಗ್ಗೆ ಮಾಹಿತಿ ತಿಳಿಸಿ. ಹೊಸದಾಗಿ ಮತದಾರರ ಹೆಸರು ಸೇರ್ಪಡೆಯಿದ್ದರೆ ಅಂತಹವರಿಗೆ ಅವಕಾಶ ನೀಡಲಾಗುವುದು’ ಎಂದರು.

ತಹಶೀಲ್ದಾರ್ ಉಮಾಕಾಂತ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಮುಖಂಡ ಎಂ.ಅಮರೇಗೌಡ ವಕೀಲ, ಬಿಎಸ್‌ಪಿ ಮುಖಂಡ ಎಂ.ಕೆ.ಜಗ್ಗೇಶ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ತಾಲ್ಲೂಕು ನೋಡಲ್ ಅಧಿಕಾರಿ ಜೆ.ಬಸಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಟಿ.ಯೋಗಿತಾಬಾಯಿ, ಸಬ್ಇನ್ಸ್‌ಪೆಕ್ಟರ್ ಎಲ್.ಬಿ.ಅಗ್ನಿ, ತುರ್ವಿಹಾಳ ವಲಯ ಸಿಡಿಪಿಒ ಅಶೋಕ, ಬಿಸಿಯೂಟ ಅಧಿಕಾರಿ ಶರಣಪ್ಪ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT