ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ನಡಿಗೆ’ ಕಾರ್ಯಾಗಾರ: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡರ ಟೀಕೆ

Last Updated 19 ಅಕ್ಟೋಬರ್ 2021, 4:18 IST
ಅಕ್ಷರ ಗಾತ್ರ

ತಿಪಟೂರು: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತಕ್ಕೆ ದೇಶದ ಜನರು ನಲುಗಿ ಹೋಗಿದ್ದು, ಮೋದಿಯ ಬಣ್ಣದ ಮಾತಿಗೆ ಮರುಳಾಗಿ ಕುಟುಂಬ ನಿರ್ವಹಣೆ ಮಾಡಲಾಗದೇ ಬೀದಿಗೆ ಬರುವಂತಾಗಿದೆ’ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಆರೋಪಿಸಿದರು.

ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಸೋಮವಾರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಘಟಕದಿಂದ ನಡೆದ ‘ಗಾಂಧಿ ನಡಿಗೆ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ದೇಶದ ಬಗ್ಗೆ ಚಿಂತನೆ ಮಾಡುತ್ತಾ ಬಂದಿರುವುದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ. ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶೇ 90ಕ್ಕೂ ಅಧಿಕ ಪಾಲನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಲಾಗಿದೆ. ಕೇಂದ್ರದಲ್ಲಿ 7 ವರ್ಷದಿಂದ ಸರ್ಕಾರ ನಡೆಸುತ್ತಿರುವ ಬಿಜೆಪಿ ಖಾಸಗೀಕರಣ, ಬೆಲೆ ಏರಿಕೆ ಆದ್ಯತೆ ನೀಡಿದೆಯೇ ಹೊರೆತು ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಯಾವುದೇ ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ, ಸಮುದಾಯಗಳು ಇಂದಿಗೂ ಕಷ್ಟದಲ್ಲಿವೆ. ಅವರಿಗೆ ಸಹಕಾರ ನೀಡುವ ಬದಲು ಬೆಲೆ ಏರಿಕೆಯ ಬಿಸಿ ನೀಡಿ ಕುಟುಂಬ ನಿರ್ವಹಣೆ ಮಾಡಲಾಗದೇ ಬೀದಿಗೆ ಬರುವಂತಾಗಿದೆ. ಇನ್ನೂ ತಾಲ್ಲೂಕಿನಲ್ಲಿ ಕಳೆದಬಾರಿ ಅಷ್ಟೊಂದು ಅಭಿವೃದ್ಧಿ ಕಾರ್ಯಗಳಾಗಿದ್ದು, ಈ ಬಾರಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ನಮ್ಮ ಕಾಲದ ಕಾರ್ಯಗಳನ್ನು ಉದ್ಘಾಟಿಸುವಲ್ಲಿ ಕಾರ್ಯನಿರತರಾಗಿರುವುದು ಹಾಸ್ಯಾಸ್ಪದವಾಗಿದೆ. ತಾಲ್ಲೂಕಿನ ಅಗತ್ಯತೆಗಳನ್ನು ಅರಿತು ಸಚಿವರು ಕಾರ್ಯನಿರ್ವಹಣೆ ಮಾಡಬೇಕಿದೆ ಎಂದರು.

ಮಾಜಿ ತಾ.ಪಂ.ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಮಾತು ಕೊಟ್ಟಂತೆ ತಾಲ್ಲೂಕಿನ ಕೆರೆಗಳಿಗೆ ನೀರು ಬಿಡುವಲ್ಲಿ ಯಶಸ್ವಿಯಾಗಿದ್ದಾರೆಯೇ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಕೇವಲ ಚುನಾವಣಾ ಪ್ರಚಾರಕ್ಕಾಗಿ ಭಾಷಣ ಮಾಡಿದ್ದು ಹೊನ್ನವಳ್ಳಿ ಕೆರೆಗೂ ನೀರು ಹರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಡೆನೂರು ಕಾಂತರಾಜು ಮಾತನಾಡಿ, ಜನಸಾಮಾನ್ಯರು ಈಗಲಾದರೂ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕೇವಲ ಮಾತಿನ ಮೋಡಿಗೆ ಒಳಗಾಗಿ ಮತ ನೀಡದೇ ಅಭಿವೃದ್ಧಿ ಮಾಡಿದವರಿಗೆ ಮತ ನೀಡಬೇಕು. ದೇಶದ ಆರ್ಥಿಕತೆ ಅಭಿವೃದ್ಧಿಗೆ 10 ವರ್ಷ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ‍ಅಪಾರ ಕೊಡುಗೆ ನೀಡಿದ್ದರು. ಅಂದಿನ ಅಭಿವೃದ್ಧಿ ಕಾರ್ಯಗಳಿಂದ ದೇಶದಲ್ಲಿ ಆರ್ಥಿಕ ಸುಧಾರಣೆಯಾಗಿತ್ತು. ಆದರೆ ಖಾಸಗೀಕರಣದಿಂದಾಗಿ ಕಾರ್ಪೋರೇಟ್ ಕಂಪನಿಗಳ ಗುಲಾಮರಂತೆ ನಡೆದುಕೊಳ್ಳುತ್ತಿರುವ ಬಿಜೆಪಿ ಸರ್ಕಾರದ ನಡೆ ಖಂಡನೀಯ ಎಂದರು.

ತಾ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ದೊಡ್ಡಯ್ಯ, ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಮೋಹನ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ನಂಜಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾ ವೀಕ್ಷಕರ ಹರೀಶ್, ಮಾದಿಹಳ್ಳಿ ಪ್ರಕಾಶ್, ಗ್ರಾಮದ ಮುಖಂಡ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT