ರಾಹುಲ್ ಗಾಂಧಿ ಪ್ರಧಾನಿ ನಮ್ಮ ಗುರಿ

7
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಕರೆ

ರಾಹುಲ್ ಗಾಂಧಿ ಪ್ರಧಾನಿ ನಮ್ಮ ಗುರಿ

Published:
Updated:
Deccan Herald

ತುಮಕೂರು: ’ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡುವುದು ಎಲ್ಲರ ಗುರಿಯಾಗಿರಲಿ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸನ್ಮಾನಿತರಾದ ಬಳಿಕ ಮಾತನಾಡಿದರು.

'ಕಾಂಗ್ರೆಸ್ ಪಕ್ಷ ಎಂದರೆ ತಾಯಿ ಇದ್ದಂತೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡುವಂತಹ ಪಕ್ಷ ನಮ್ಮದು. ಇಂತಹ ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಯಾರೂ ಮಾಡಬಾರದು ಎಂದು ಕಿವಿಮಾತು' ಹೇಳಿದರು.

'ಪಕ್ಷದ ಸಂಘಟನೆಗೆ ಶ್ರಮಿಸಿದವರನ್ನು ಪಕ್ಷ ಎಂದೂ ಕಡೆಗಣಿಸುವುದಿಲ್ಲ. ಇದಕ್ಕೆ ನಾನೇ ಉದಾಹರಣೆಯಾಗಿದ್ದು, ಸೇವಾದಳ ಪ್ರಧಾನ ಕಾರ್ಯದರ್ಶಿಯಾಗಿ, 2 ಬಾರಿ ಗ್ರಾಮ ಪಂಚಾಯಿತಿ, ಒಂದು ಬಾರಿ ಪಟ್ಟಣ ಪಂಚಾಯಿತಿ, 2 ಬಾರಿ ಜಿಲ್ಲಾ ಪಂಚಾಯಿತಿ ಹಾಗೂ 3 ಬಾರಿ ಶಾಸಕನಾಗಿದ್ದೇನೆ. ಈಗ ಮಂತ್ರಿಯಾಗಿದ್ದೇನೆ. ಪಕ್ಷ ಗುರಿತಿಸಿದ್ದರಿಂದಲೇ ಇದೆಲ್ಲ ಸಾಧ್ಯವಾಯಿತು' ಎಂದು ತಿಳಿಸಿದರು.

'ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವನಾಗಿ ಬಡವರಿಗೆ ಸಹಾಯ ಮಾಡಲು ಸಾಕಷ್ಟು ಅವಕಾಶವಿದೆ. ಆ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ' ಎಂದು ನುಡಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ಕೆಂಚಮಾರಯ್ಯ ಮಾತನಾಡಿ, ‘ಸಚಿವರಾದ ಪುಟ್ಟರಂಗಶೆಟ್ಟಿ ಅವರು ಬಹಳ ಸರಳ ಸಜ್ಜನರು. ಅವರ ಇಲಾಖೆಯು ಅನೇಕ ಜನಪರ ಯೋಜನೆಗಳನ್ನು ಹೊಂದಿದೆ. ಪಕ್ಷದ ಕಾರ್ಯಕರ್ತರು ಅವುಗಳ ಪ್ರಯೋಜನ ಪಡೆಯಬೇಕು. ಬೇರೆಯವರು ಪ್ರಯೋಜನ ಪಡೆದುಕೊಳ್ಳಲು ತಿಳಿಸಿಕೊಡಬೇಕು' ಎಂದು ಹೇಳಿದರು.

ಕೆಪಿಸಿಸಿ ಸದಸ್ಯರಾದ ದಿನೇಶ್, ಉಪಾಧ್ಯಕ್ಷ ಶಿವಮೂರ್ತಿ, ಮರಿಚಿನ್ನಮ್ಮ, ನರಸಿಯಪ್ಪ, ಚಂದ್ರಶೇಖರಗೌಡ್ರು, ಕೆಂಪಣ್ಣ, ಪಾಲಿಕೆ ಸದಸ್ಯರಾದ ಫರೀದ ಬೇಗಂ ಹಫೀಜ್, ಇನಾಯತ್ ಉಲ್ಲಾಖಾನ್, ನಾಗಮಣಿ, ಸೌಭಾಗ್ಯ, ಸಂಜೀವ್ ಸುಂದರಕುಮಾರ್, ಜಾರ್ಜ್, ಶ್ರೀನಿವಾಸ, ನರಸಿಂಹಮೂರ್ತಿ, ಹಿದಾಯತ್, ಮಧುಸೂದನ್, ಜಿಲ್ಲಾ ವಕ್ತಾರ ರಾಜೇಶ್ ದೊಡ್ಮನೆ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !