ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿಗೆ ಪ್ರೋತ್ಸಾಹ ಧನ: ಕಾಂಗ್ರೆಸ್ ಭರವಸೆ

‘ಪ್ರಜಾ ಧ್ವನಿ’ ಬಸ್ ಯಾತ್ರೆ; ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ
Last Updated 24 ಜನವರಿ 2023, 15:35 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಕಟಿಸಿದರು.

ನಗರದ ಗಾಜಿನ ಮನೆಯಲ್ಲಿ ಮಂಗಳವಾರ ಕಾಂಗ್ರೆಸ್ ‘ಪ್ರಜಾ ಧ್ವನಿ’ ಬಸ್ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಬರದ ಸಮಯದಲ್ಲಿ ಪ್ರತಿ ತೆಂಗಿನ ಮರಕ್ಕೆ ₹1 ಸಾವಿರ ಪರಿಹಾರ ನೀಡಲಾಗಿತ್ತು. ಮುಂದೆ ಕೊಬ್ಬರಿಗೂ ಪ್ರೋತ್ಸಾಹ ಧನ ಕೊಡಲಾಗುವುದು ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬೆಲೆ ಏರಿಕೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿಲ್ಲ ಎಂದು ತಾಕತ್ತಿದ್ದರೆ ಬಿಜೆಪಿಯವರು, ಪ್ರಧಾನಿ ನರೇಂದ್ರ ಮೋದಿ ಹೇಳಲಿ ಎಂದು ಸವಾಲು ಹಾಕಿದರು. ಬಿಜೆಪಿ ಮಾಡಿರುವ ಪಾಪದ ಚಾರ್ಜ್‌ಶೀಟ್‌ ಅನ್ನು ಜನರ ಮುಂದಿಟ್ಟಿದ್ದೇವೆ. ಅದಕ್ಕೆ ಅವರಿಗೆ ನಡುಕ ಆರಂಭವಾಗಿದೆ. ಶೇ 40ರಷ್ಟು ಕಮಿಷನ್ ಬಗ್ಗೆ ಹೇಳಿದರೆ ನಮ್ಮ ವಿರುದ್ಧವೇ ಸುಳ್ಳು ಆರೋಪ ಮಾಡುತ್ತಾರೆ. ಕಮಿಷನ್ ಕೇಳದಿದ್ದರೆ ಗುತ್ತಿಗೆದಾರರಿಗೆ ನೀಡಬೇಕಿರುವ ₹25 ಸಾವಿರ ಕೋಟಿಗೂ ಹೆಚ್ಚು ಬಿಲ್ ಬಾಕಿ ಉಳಿಸಿಕೊಂಡಿರುವುದು ಏಕೆ ಎಂದು ಪ್ರಶ್ನಿಸಿದರು.

ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಅವರನ್ನು ಬಿಜೆಪಿಯ ಬಿ ಟೀಂ ಎನ್ನದೆ ಇನ್ನೇನು ಹೇಳಬೇಕು. ಬಿಜೆಪಿ ಜತೆ ಅಧಿಕಾರ ಮಾಡಿದವರನ್ನು ಜಾತ್ಯತೀತರು ಎನ್ನಲಾಗುತ್ತದೆಯೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ತಿಂಗಳೂ ₹2 ಸಾವಿರ ನೀಡುವ ಭರವಸೆ ಕೊಟ್ಟಿದ್ದೇವೆ. ಮಾತಿಗೆ ತಪ್ಪಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಪಾವಗಡ ತಾಲ್ಲೂಕಿನ ಒಂದೇ ಕಡೆ 3 ಸಾವಿರ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿಸಿದವನಿಗೆ ಉಚಿತವಾಗಿ ವಿದ್ಯುತ್ ಕೊಡುವುದು ಗೊತ್ತಿಲ್ಲವೆ’ ಎಂದು ಭರವಸೆಯ ಮಾತುಗಳನ್ನಾಡಿದರು.

ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದ್ದರೂ ಅದನ್ನು ಜನರಿಗೆ ಕೊಡದೆ ಬೇರೆ ರಾಜ್ಯದವರಿಗೆ ಬಿಜೆಪಿಯವರು ಮಾರಾಟ ಮಾಡುತ್ತಿದ್ದಾರೆ. ಆದರೆ ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ. ನಮ್ಮ ಕಾರ್ಯಕ್ರಮಗಳನ್ನು ಕಂಡು ಬಿಜೆಪಿ, ಜೆಡಿಎಸ್‌ನವರಿಗೆ ಎದೆ ಡವಡವ ಎನ್ನುತ್ತಿದೆ. ಅಧಿಕಾರದಲ್ಲಿ ಇದ್ದಾಗ ಉಚಿತವಾಗಿ ವಿದ್ಯುತ್ ಕೊಡಲಾಗದೆ, ಮುಂದೆ ಅಧಿಕಾರಕ್ಕೆ ಬಂದಾಗ ಕೊಡುತ್ತೇವೆ ಎನ್ನುತ್ತಿದ್ದಾರೆ. ಇದನ್ನು ಜನರು ನಂಬುವುದಿಲ್ಲ ಎಂದು ಹೇಳಿದರು.

ಜೆಡಿಎಸ್‌ನವರು ಅಧಿಕಾರಕ್ಕೆ ಬರಲ್ಲ. ಆ ಪಕ್ಷದ ನಾಯಕರು ಕಾಂಗ್ರೆಸ್‌ನತ್ತ ವಲಸೆ ಬರುತ್ತಿದ್ದಾರೆ. ಶಾಸಕರಾಗಿದ್ದವರೇ ಪಕ್ಷ ಬಿಟ್ಟು ಬರುತ್ತಿರುವುದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ‘ಸಂಸದ, ಸಚಿವರ ನಡುವೆಯೇ ಒಳ ಜಗಳ ಜೋರಾಗಿದೆ. ಸರ್ಕಾರ ಮ್ಯಾನೇಜ್ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಸಚಿವರೇ ಹೇಳಿದ್ದಾರೆ. ಅಮಿತ್ ಶಾ ಅವರನ್ನು ರೌಡಿ ಎನ್ನುತ್ತಾರೆ. ಪಕ್ಷದ ಒಳ ಜಗಳಕ್ಕೆ ಇದಕ್ಕಿಂತ ಉದಾಹರಣೆ ಬೇಕೆ’ ಎಂದು ಕೇಳಿದರು.

ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಮುಖಂಡರಾದ ಎಲ್.ಹನುಮಂತಯ್ಯ, ಟಿ.ಬಿ.ಜಯಚಂದ್ರ, ಯು.ಟಿ.ಖಾದರ್, ಮಯೂರ ಜಯಕುಮಾರ್, ವೆಂಕಟರಮಣಪ್ಪ, ಡಾ.ಎಚ್.ಡಿ.ರಂಗನಾಥ್, ರಾಣಿ ಸತೀಶ್, ಎಚ್.ಆಂಜನೇಯ, ಪುಷ್ಪ ಅಮರನಾಥ್, ಚಂದ್ರಪ್ಪ, ಎಂ.ಸಿ.ವೇಣುಗೋಪಾಲ್, ವಿ.ಎಸ್.ಉಗ್ರಪ್ಪ, ಷಫಿ ಅಹ್ಮದ್, ರಫಿಕ್ ಅಹ್ಮದ್, ಕೆ.ಷಡಕ್ಷರಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಇತರರು ಉಪಸ್ಥಿತರಿದ್ದರು.

**

ಜಿಲ್ಲೆಗೆ ಬಿಜೆಪಿ ಕೊಡುಗೆ ಶೂನ್ಯ: ಪರಮೇಶ್ವರ

ತುಮಕೂರು ಜಿಲ್ಲೆಗೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಶಾಸಕ ಡಾ.ಜಿ.ಪರಮೇಶ್ವರ ಕುಟುಕಿದರು.

ಎಚ್‌ಎಎಲ್ ಘಟಕದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಜಿಲ್ಲೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, 2018ರಲ್ಲಿ ಮೊದಲ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. 6,500 ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದ್ದರು. ಆದರೆ ಈವರೆಗೂ ಹೆಲಿಕಾಪ್ಟರ್ ಹಾರಾಟ ನಡೆಸಲಿಲ್ಲ. ಸ್ಥಳೀಯರಿಗೆ ಉದ್ಯೋಗವೂ ಸಿಗಲಿಲ್ಲ. ಕೇವಲ ಸುಳ್ಳಿನ ಭರವಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಗೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಎಚ್‌ಎಂಟಿ ಕಾರ್ಖಾನೆಗೆ ಆಧುನಿಕ ಸ್ಪರ್ಶ ನೀಡದೆ ಮುಚ್ಚುವಂತೆ ಮಾಡಿದ್ದೀರಿ. ಆ ಜಾಗದಲ್ಲಿ ಇಸ್ರೋ ಸಂಸ್ಥೆ ಮಾಡುತ್ತೇವೆ ಎಂದು ಹೇಳಿದ್ದರೂ ಅದೂ ಆಗಿಲ್ಲ. ಎತ್ತಿನಹೊಳೆ ಯೋಜನೆಗೆ ಹಣ ಬಿಡುಗಡೆ ಮಾಡದೆ ಯೋಜನೆ ಮೊತ್ತ ₹13,500 ಕೋಟಿಯಿಂದ ₹23 ಸಾವಿರ ಕೋಟಿಗೆ ಏರಿಕೆಯಾಗಿದೆ. ಭದ್ರ ಮೇಲ್ದಂಡೆ ಯೋಜನೆಗೂ ಹಣ ಕೊಟ್ಟಿಲ್ಲ. ಹೇಮಾವತಿ ನಾಲೆ ನಿರ್ಮಾಣಕ್ಕೂ ಅನುದಾನ ಒದಗಿಸಿಲ್ಲ. ಹಾಗಾದರೆ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಬೊಮ್ಮಾಯಿ ಕೊಡುಗೆ ಏನು ಎಂದು ಪ್ರಶ್ನಿಸಿದರು.

ನಗರದಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸಾವಿರಾರು ಕೋಟಿ ಖರ್ಚು ಮಾಡಲಾಗಿದೆ. ಎಲ್ಲಾದರೂ ಸ್ಮಾರ್ಟ್ ಕಾಣುತ್ತಿದೆಯೆ? ಈ ಯೋಜನೆ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಲಿಂಗಾಯತರು ಬಿಜೆಪಿಗೆ ಓಟು ಕೊಡಲ್ಲ: ರಾಜಣ್ಣ

ಕಳೆದ ಬಾರಿ ತಿಪಟೂರಿಗೆ ಬಂದಿದ್ದ ಬಿ.ಎಸ್.ಯಡಿಯೂರಪ್ಪ, ‘ನಾನು ಮುಖ್ಯಮಂತ್ರಿ ಆಗಬೇಕಾದರೆ ಬಿ.ಸಿ.ನಾಗೇಶ್‌ ಅವರಿಗೆ ಮತ ಹಾಕುವಂತೆ ಲಿಂಗಾಯತ ಸಮುದಾಯದವರಿಗೆ ಮನವಿ ಮಾಡಿದರು. ಅದೇ ಲಿಂಗಾಯತರು ತಮ್ಮ ಸಮುದಾಯದ ಕೆ.ಷಡಕ್ಷರಿ ಅವರನ್ನು ನೋಲಿಸಿದರು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ಲಿಂಗಾಯತ ಸಮುದಾಯದ ಮುಖಂಡ ಬಿ.ಎಸ್.ಯಡಿಯೂರಪ್ಪ ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡರು. ಈಗ ಯಾವ ಮುಖ ಇಟ್ಟುಕೊಂಡು ಲಿಂಗಾಯತರು ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಾರೆ. ಈಗ ಲಿಂಗಾಯತರು ಬಿಜೆಪಿಯವರಿಗೆ ಮತ ಹಾಕುತ್ತಾರೆಯೆ? ಎಂದರು.

‘ಎಲ್ಲರೂ ಒಟ್ಟಾಗಿ’

ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ನಾಯಕರು ಒಳಜಗಳ ಬಿಟ್ಟು ಒಟ್ಟಾಗಿ ಹೋಗಬೇಕು ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.

ಜಗಳ ಬಿಟ್ಟು ಒಟ್ಟಾಗದಿದ್ದರೆ ಗೆಲುವು ಕಷ್ಟಕರವಾಗಲಿದೆ. ಒಗ್ಗೂಡಿದರೆ ಜಿಲ್ಲೆಯಲ್ಲಿ 7ರಿಂದ 8 ಸ್ಥಾನ ಗೆಲ್ಲಬಹುದು ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಸಹ ಇದೇ ದಾಟಿಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT