ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಹೆಚ್ಚಳ: ಕಾಂಗ್ರೆಸ್ ಪ್ರತಿಭಟನೆ

ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ
Last Updated 22 ಜೂನ್ 2020, 14:55 IST
ಅಕ್ಷರ ಗಾತ್ರ

ತುಮಕೂರು: ನಿರಂತರವಾಗಿ ತೈಲಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರು ಪಕ್ಷದ ಮುಖಂಡರು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ‘ಕೊರೊನಾ ಸಂಕಷ್ಟದಲ್ಲಿ ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಸರ್ಕಾರ ನಿರಂತರವಾಗಿ ತೈಲ ಬೆಲೆ ಹೆಚ್ಚಳ ಮಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ’ ಎಂದರು.

ಮಾಜಿ ಶಾಸಕ ಡಾ.ರಫೀಕ್ ಅಹಮದ್, ‘ಕಳೆದ ಒಂದು ತಿಂಗಳಿಂದ ಕಚ್ಚಾ ತೈಲ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಬ್ಯಾರಲ್‍ಗೆ 40 ಡಾಲರ್ ಇದೆ. ಆದರೆ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಕಳೆದ 14 ದಿನಗಳಲ್ಲಿ ₹ 6ರಿಂದ10 ಹೆಚ್ಚಳವಾಗಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಅವಕಾಶ ಕೇಳಿದರೂ ಅನುಮತಿ ನೀಡುತ್ತಿಲ್ಲ. ಪ್ರತಿರೋಧದ ಧ್ವನಿಗಳನ್ನು ಅಡಗಿಸುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.

ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ, ‘2012ರಲ್ಲಿ ಅಂದಿನ ಮನಮೋಹನ್‍ಸಿಂಗ್ ಸರ್ಕಾರ ತೈಲ ಬೆಲೆಯನ್ನು 12 ಪೈಸೆ ಹೆಚ್ಚಳ ಮಾಡಿದ್ದನ್ನು ಖಂಡಿಸಿ, ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ 24 ಗಂಟೆ ಗುಜರಾತ್ ಬಂದ್ ನಡೆಸಿದ್ದರು. ಕಳೆದ 14 ದಿನಗಳಲ್ಲಿ ತೈಲ ಬೆಲೆ ಹೆಚ್ಚಳವಾದರೂ ಜನರು ವಿರೋಧಿಸುತ್ತಿಲ್ಲ’ ಎಂದರು.

ಜಿ.ಪಂ ಸದಸ್ಯ ಕೆಂಚಮಾರಯ್ಯ, ‘ತೈಲಬೆಲೆ ಹೆಚ್ಚಳವಾದರೂ ಜನಸಾಮಾನ್ಯರಿಗೆ ಅದು ತಿಳಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಕಥೆಗಳನ್ನು ಕಟ್ಟಲಾಗುತ್ತಿದೆ. ಬಿಜೆಪಿ ಸರ್ಕಾರದಿಂದ ಬಡವರಿಗೆ ಉಳಿಗಾಲವಿಲ್ಲ. ಕೇಂದ್ರದ ಅನ್ಯಾಯಗಳನ್ನು ಪಕ್ಷದ ಕಾರ್ಯಕರ್ತರು ಜನಸಾಮಾನ್ಯರಿಗೆ ತಿಳಿಸಬೇಕು’ ಎಂದು ಹೇಳಿದರು.

ಮೇಯರ್ ಫರೀದಾ ಬೇಗಂ, ಮಾಜಿ ಶಾಸಕ ಎಸ್.ಷಫಿ ಅಹಮದ್, ಮುಖಂಡರಾದ ಆರ್.ನಾರಾಯಣ್, ಡಿ.ಟಿ.ವೆಂಕಟೇಶ್, ನರಸೀಯಪ್ಪ, ಪಾಲಿಕೆ ಸದಸ್ಯರಾದ ನಯಾಜ್, ಮಹೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾರುದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT