ಸೋಮವಾರ, ಮಾರ್ಚ್ 1, 2021
19 °C

20ರಂದು ರೈತರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಜ.20ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿವೆ ಎಂದು ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಪಿಎ ಸರ್ಕಾರ ದೇಶದಲ್ಲಿ ಹಸಿವು ಮತ್ತು ಬಡತನ ನೀಗಿಸಬೇಕು ಎಂದು ಕೆಲಸ ಮಾಡಿತು. ಆದರೆ ಎನ್‌ಡಿಎ ಸರ್ಕಾರ ದೇಶದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡಬೇಕು ಎನ್ನುವ ದಿಸೆಯಲ್ಲಿ ಅಷ್ಟೇ ಯೋಚಿಸುತ್ತಿದೆ. ಇವರಿಗೆ ಹಸಿವು ನೀಗಿಸುವುದು ಮುಖ್ಯವಲ್ಲ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮುಖ್ಯವಾಗಿದೆ. ಇದೂ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಕಾಯ್ದೆಗಳ ಬಗ್ಗೆ ರೈತರು ಸೇರಿದಂತೆ ವಿವಿಧ ವಲಯಗಳ ಜನರಲ್ಲಿ ಆತಂಕ ಇದೆ. ಇದನ್ನು ಸರ್ಕಾರ ನಿವಾರಣೆ ಮಾಡಬೇಕು. ಆದರೆ ಕಾಯ್ದೆಗಳಿಂದ ಏನೂ ಆಗುವುದಿಲ್ಲ ಎಂದು ಸಲ್ಲದ ಸಬೂಬು ಹೇಳುತ್ತಿದೆ ಎಂದರು.

ಮುಕ್ತ ಮಾರುಕಟ್ಟೆಯಿಂದ ರೈತರ ಆತ್ಮಹತ್ಯೆ ತಡೆಯಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ ಎಪಿಎಂಸಿ ವ್ಯವಸ್ಥೆಯಲ್ಲಿ ಖಾಸಗಿಯವರು ಪ್ರವೇಶಿಸಿದರೆ ಅವರು ಮನಸ್ಸಿಗೆ ಬಂದ ಖರೀದಿ ಮತ್ತು ಮಾರಾಟ ದರ ನಿಗದಿಗೊಳಿಸುವರು ಎಂದು ಹೇಳಿದರು.

ಪ್ರಮುಖ ಮಸೂದೆಗಳನ್ನು ತರುವಾಗ ಸದನದ ಜತೆಗೆ ಹೊರಗೂ ಚರ್ಚೆ ಆಗಬೇಕು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಶ್ವಾಸವನ್ನೇ ಮಾಡಲಿಲ್ಲ ಎಂದರು.

ರೈತರಿಗೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ಉದ್ದೇಶ ಕಾಂಗ್ರೆಸ್‌ಗೆ ಎಂದಿಗೂ ಇದೆ. ಆದ್ದರಿಂದ ಇಡೀ ದೇಶದಲ್ಲಿ ಎಲ್ಲ ಕಡೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಪಂಜಾಬ್, ಹರಿಯಾಣ ಅಷ್ಟೇ ಅಲ್ಲ ಎಲ್ಲ ಕಡೆಯೂ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದೆ ಎಂದರು.

ಇದು ಕಾಂಗ್ರೆಸ್ ಪ್ರೇರಿತ ಹೋರಾಟ ಎಂದು ಬಿಜೆಪಿ ಹೇಳುತ್ತಿದೆ. ಆದ ಕಾರಣ ಪಕ್ಷದ ನಾಯಕರು ನೇರವಾಗಿ ಆ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಆದ ಕಾರಣ ನೇರವಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು