ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ, ಕುಣಿಗಲ್‌ನಲ್ಲಿ ಕಾಂಗ್ರೆಸ್ ಜಯಭೇರಿ

ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಯ ಚುನಾವಣೆ: ತುರುವೇಕೆರೆ, ತಿಪಟೂರು ಅತಂತ್ರ
Last Updated 31 ಮೇ 2019, 12:25 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಪಾವಗಡ ಮತ್ತು ಕುಣಿಗಲ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಕಂಡಿದೆ.
ತಿಪಟೂರು ನಗರಸಭೆ ಹಾಗೂ ತುರುವೇಕೆರೆ ಪಟ್ಟಣ ಪಂಚಾಯಿತಿ ಅತಂತ್ರವಾಗಿವೆ. ಯಾವ ಪಕ್ಷಕ್ಕೂ ಅಧಿಕಾರದ ಗದ್ದುಗೆ ಏರುವ ಸ್ಥಾನ ಬಲ ಲಭಿಸಿಲ್ಲ.

ಪಾವಗಡ ಮತ್ತು ಕುಣಿಗಲ್ ಪುರಸಭೆಗಳಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆದರೆ, ತಿಪಟೂರು ನಗರಸಭೆ, ತುರುವೇಕೆರೆ ಪಟ್ಟಣ ಪಂಚಾಯಿತಿಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಲ ಇಲ್ಲದೇ ಇರುವುದರಿಂದ ಸರ್ಕಸ್ ಮಾಡಬೇಕಾಗಿದೆ.

ತಿಪಟೂರು ನಗರಸಭೆ ಅಧಿಕಾರ ಗದ್ದುಗೆ ಏರಲು ಮ್ಯಾಜಿಕ್ ಸ್ಥಾನ ಬಲ 16 ಅಗತ್ಯವಿದ್ದರೆ, ತುರುವೇಕೆರೆ ಪಟ್ಟಣ ಪಂಚಾಯಿತಿಗೆ 9 ಸ್ಥಾನ ಬಲ ಬೇಕು. ತಿಪಟೂರಿನಲ್ಲಿ 11 ಸ್ಥಾನ ಬಲ ಹೊಂದಿರುವ ಬಿಜೆಪಿ ಪಕ್ಷೇತರ 6 ಅಭ್ಯರ್ಥಿಗಳ ಬೆಂಬಲ ಪಡೆದು ಅಧಿಕಾರ ಹಿಡಿಯಲು ತಂತ್ರ ರೂಪಿಸಿದೆ. ಶಾಸಕರು, ಸಂಸದರು ಬಿಜೆಪಿಯವರೇ ಇರುವುದರಿಂದ ಅಧಿಕಾರ ಗದ್ದುಗೆ ಸುಲಲಿತವಾಗಿ ಲಭಿಸುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.

ಮತ್ತೊಂಡೆ 9 ಸ್ಥಾನ ಗೆದ್ದಿರುವ ಕಾಂಗ್ರೆಸ್, 5 ಸ್ಥಾನ ಗೆದ್ದಿರುವ ಜೆಡಿಎಸ್ ಪಕ್ಷೇತರ 6 ಸದಸ್ಯರ ಬೆಂಬಲ ಪಡೆದು ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿವೆ. ತುಮಕೂರು ಮಹಾನಗರ ಪಾಲಿಕೆಯ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸೂತ್ರವನ್ನು ಇಲ್ಲಿ ಅನುಸರಿಸುವ ಬಗ್ಗೆ ಉಭಯ ಪಕ್ಷಗಳ ಮುಖಂಡರಲ್ಲಿ ಚರ್ಚೆಗಳು ನಡೆದಿವೆ.

ತುರುವೇಕೆರೆಯಲ್ಲಿ 6 ಸ್ಥಾನ ಗೆದ್ದಿರುವ ಬಿಜೆಪಿ ಅಧಿಕಾರ ಹಿಡಿಯಲು ಇನ್ನೂ 3 ಸ್ಥಾನ ಬಲದ ಅಗತ್ಯತೆ ಇದೆ. ಪಕ್ಷೇತರ ಒಬ್ಬರು, ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳ ಸೆಳೆಯುವ ಯತ್ನಕ್ಕೆ ಕೈ ಹಾಕಿದೆ. ಇಲ್ಲಿಯೂ ಬಿಜೆಪಿ ಶಾಸಕ, ಸಂಸದರ ಬಲ ಇರುವುದರಿಂದ ಅಧಿಕಾರ ಹಿಡಿಯಲು ತಂತ್ರ ರೂಪಿಸಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಸ್ಥಾನಗಳು?

ಪಾವಗಡ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 20 ಸ್ಥಾನ ಗಳಿಸಿದೆ. ಜೆಡಿಎಸ್‌ಗೆ 2, ಪಕ್ಷೇತರರಿಗೆ 1 ಸ್ಥಾನಗಳು ಲಭಿಸಿವೆ.

ಕುಣಿಗಲ್ ಪುರಸಭೆಯ 23 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿ 4, ಜೆಡಿಎಸ್ 3 , ಪಕ್ಷೇತರರಿಗೆ 1 ಸ್ಥಾನ ಲಭಿಸಿವೆ.

ತುರುವೇಕೆರೆ ಪಟ್ಟಣ ಪಂಚಾಯಿತಿಯ 14 ಸ್ಥಾನಗಳಲ್ಲಿ ಬಿಜೆಪಿ 6, ಜೆಡಿಎಸ್ 5, ಕಾಂಗ್ರೆಸ್ 2 ಹಾಗೂ ಪಕ್ಷೇತರರಿಗೆ 1 ಸ್ಥಾನಗಳನ್ನು ಗೆದ್ದಿವೆ. ತಿಪಟೂರು ನಗರಸಭೆ 31 ಸ್ಥಾನಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 9, ಜೆಡಿಎಸ್ 5 , ಪಕ್ಷೇತರ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT