ತುಮಕೂರು: ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೇವಲ ಪೈಪ್‌ಲೈನ್ ಕಾಮಗಾರಿಯಷ್ಟೇ ಅಲ್ಲದೇ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾರ್ಯವೂ ಕಳಪೆಯಾಗಿರುವ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿವೆ.
ತಾಲ್ಲೂಕಿನ ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನಗ ಗ್ರಾಮದಲ್ಲಿ ₹97 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತೊಟ್ಟಿಕ್ಕುತ್ತಿದೆ. ಬೆಟ್ಟದಿಂದ ಹಳ್ಳ ಹರಿಯುವ ಮಾರ್ಗದಲ್ಲಿ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, ಮಳೆ ಬಂದ ಪ್ರತಿ ಬಾರಿಯೂ ನೀರು ಹರಿಯುವ ರಭಸಕ್ಕೆ ಟ್ಯಾಂಕ್ ಬಳಿ ಹಾಕಿರುವ ಸಿಮೆಂಟ್ ಕಿತ್ತು ಬರುತ್ತಿದೆ. ನೀರು ಸರಬರಾಜು ಮಾಡುವ ಮುನ್ನವೇ ಹಾಳಾಗುತ್ತಿದೆ. ಟ್ಯಾಂಕ್‌ಗೆ ಕಬ್ಬಿಣದ ಮೆಟ್ಟಿಲು ಹಾಕಿದ್ದು, ಅದು ಸಹ ಸುರಕ್ಷತೆಯಿಂದ ಕೂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಗ್ರಾಮದಲ್ಲಿ ಹಳೆಯ ಟ್ಯಾಂಕ್ ಇದ್ದರೂ ಹೊಸದಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಲಾಗುತ್ತಿದೆ. 25 ವರ್ಷಗಳ ಹಿಂದೆ ನಿರ್ಮಿಸಿದ್ದ ಟ್ಯಾಂಕ್ ಸುರಕ್ಷಿತವಾಗಿದೆ. ಇಲ್ಲಿಂದಲೇ ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಹೊಸದಾಗಿ ಟ್ಯಾಂಕ್ ನಿರ್ಮಿಸುವ ಅವಶ್ಯಕತೆ ಇರಲಿಲ್ಲ. ಇದು ಲಕ್ಷಾಂತರ ರೂಪಾಯಿ ಹಣ ಪೋಲು ಮಾಡುವ ಉದ್ದೇಶದಿಂದ ರೂಪಿಸಿದ ಯೋಜನೆಯಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಟ್ಯಾಂಕ್ ನಿರ್ಮಾಣಕ್ಕೆ ತಜ್ಞರ ತಂಡ ನೇಮಿಸಬೇಕು. ಹಲವು ವರ್ಷಗಳ ಕಾಲ ಅನುಭವ ಹೊಂದಿರುವ ಎಂಜಿನಿಯರ್ ನೇತೃತ್ವದಲ್ಲಿ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಇಂತಹ ವಾತಾವರಣ ಕಾಣಿಸುತ್ತಿಲ್ಲ. ಟೆಂಡರ್ ಪಡೆದ ಗುತ್ತಿಗೆದಾರರು ಸಿಕ್ಕ ಸಿಕ್ಕವರ ಕಡೆಯಿಂದ ಕಾಮಗಾರಿ ಮಾಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಹಲವು ವರ್ಷ ಬಾಳಿಕೆ ಬರಬೇಕಾದ ಟ್ಯಾಂಕ್‌ಗಳು ಕೆಲವೇ ದಿನಗಳಿಗೆ ಹಾಳಾಗುತ್ತಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಣ್ಣಿದ್ದೂ ಕುರುಡಾಗಿದ್ದಾರೆ. ಕನಿಷ್ಠ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿಲ್ಲ’ ಎಂದು ಕುಣಿಗಲ್‌ನ ಸಿದ್ದರಾಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧೆಡೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಉಪಯೋಗಿಸದೆ ಬಿಡಲಾಗಿದೆ. ಕಾಮಗಾರಿ ಮುಗಿದು ವರ್ಷ ಕಳೆದರೂ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಿಸುತ್ತಿಲ್ಲ. ಹೊಸದಾಗಿ ಕಟ್ಟಿದ ನಂತರ ನೀರು ಬಿಡದಿದ್ದರೆ ಟ್ಯಾಂಕ್ ಬಿರುಕು ಬಿಡುವ ಸಂಭವ ಹೆಚ್ಚಿರುತ್ತದೆ. ಹಲವು ಕಡೆಗಳಲ್ಲಿ ಇದೇ ರೀತಿಯಾಗಿದೆ. ಕೆಲಸಗಳು ಮುಗಿದ ನಂತರ ಟ್ಯಾಂಕ್‌ಗಳು ತೇವಾಂಶ ಕಂಡಿಲ್ಲ. ಇದರಿಂದ ಈಗ ಸಮಸ್ಯೆಯಾಗುತ್ತಿದೆ. ನಲ್ಲಿಗಳಿಗೆ ನೀರು ಸರಬರಾಜು ಮಾಡುವುದು ವಿಳಂಬವಾಗಿ, ಇಡೀ ಯೋಜನೆಗೆ ಹಿನ್ನಡೆಯಾಗುತ್ತಿದೆ ಎಂಬುದು ಜನರ ಆಕ್ಷೇಪವಾಗಿದೆ.
‘ಗ್ರಾಮಗಳ ಹೊರವಲಯದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿದ್ದು, ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊನೆ ಇಲ್ಲದಂತಾಗಿದೆ. ಟ್ಯಾಂಕ್‌ಗಳು ಮದ್ಯ ಪ್ರಿಯರ ನೆಚ್ಚಿನ ತಾಣಗಳಾಗಿ ಬದಲಾಗಿವೆ. ರಾತ್ರಿಯ ಹೊತ್ತಿನಲ್ಲಿ ಪಾರ್ಟಿ ಆಯೋಜನೆಗೆ ಸಿದ್ಧ ಸ್ಥಳಗಳಾಗುತ್ತಿವೆ’ ಎಂದು ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರದ ಚಂದ್ರಕಾಂತ್ ದೂರಿದರು.
ಜೆಜೆಎಂ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ
ತಾಲ್ಲೂಕು;ಅನುಮೋದನೆ;ಪೂರ್ಣ
ಚಿಕ್ಕನಾಯಕನಹಳ್ಳಿ;143;70
ಗುಬ್ಬಿ;250;61
ಕೊರಟಗೆರೆ;272;31
ಕುಣಿಗಲ್;423;55
ಮಧುಗಿರಿ;293;27
ಪಾವಗಡ;8;3
ಶಿರಾ;264;53
ತಿಪಟೂರು;281;13
ತುಮಕೂರು;226;46
ತುರುವೇಕೆರೆ;298;13
ಒಟ್ಟು;2,458;372
2,458 ಟ್ಯಾಂಕ್‌ಗಳಿಗೆ ಅನುಮೋದನೆ ತೆವಳುತ್ತಾ ಸಾಗಿದ ಜೆಜೆಎಂ ಕಾಮಗಾರಿ ಲಕ್ಷಾಂತರ ರೂಪಾಯಿ ಹಣ ಪೋಲು
2458 ಟ್ಯಾಂಕ್‌ನಲ್ಲಿ 372 ನಿರ್ಮಾಣ ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜೆಜೆಎಂ ಕಾಮಗಾರಿಗಳು ನಡೆಯುತ್ತಿವೆ. ಹಲವು ಕಡೆಗಳಲ್ಲಿ ಟ್ಯಾಂಕ್‌ಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ 2458 ಟ್ಯಾಂಕ್‌ಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು ಈವರೆಗೆ 372 ಟ್ಯಾಂಕ್ ನಿರ್ಮಾಣ ಕೆಲಸ ಮುಕ್ತಾಯವಾಗಿದೆ. ಕುಣಿಗಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 423 ಟ್ಯಾಂಕ್‌ಗಳ ನಿರ್ಮಾಣದ ಗುರಿಯಿದ್ದು ಇದರಲ್ಲಿ ಕೇವಲ 55 ಟ್ಯಾಂಕ್ ನಿರ್ಮಿಸಲಾಗಿದೆ. ವಿವಿಧೆಡೆ ಕಾಮಗಾರಿ ಪೂರ್ಣಗೊಂಡರೂ ನೀರಿನ ಟ್ಯಾಂಕ್ ಅನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಇದರಿಂದ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.