ಬುಧವಾರ, ಜೂನ್ 29, 2022
26 °C
ತಿಪಟೂರು ತಾಲ್ಲೂಕಿನ ವಿವಿಧ ಸಂಘಟನೆಗಳ ಬೆಂಬಲ

2ನೇ ದಿನ ಮುಂದುವರಿದ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಅಖಿಲ ಭಾರತ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಎರಡನೇ ದಿನದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆದಿದ್ದು ತಿಪಟೂರಿನಲ್ಲಿ ಮೂರು ತಾಲ್ಲೂಕುಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿದ್ದು ಬೆಂಬಲ ವ್ಯಕ್ತವಾಗಿದೆ.

ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಮಂಗಳವಾರ ಎರಡನೇ ದಿನದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆದಿದ್ದು ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮೂರು ತಾಲ್ಲೂಕಿನ ಸಿಐಟಿಯು, ಕರ್ನಾಟಕ ಅಂಗನವಾಡಿ ನೌಕರರ ಸಂಘ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಅಕ್ಷರ ದಾಸೋಹ ನೌಕರರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಪ್ರಾಂತ ರೈತ ಸಂಘ, ಮುನಿಸಿಪಲ್ ಕಾರ್ಮಿಕರ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ ವತಿಯಿಂದ ನಡೆಯಿತು.

ನಗರದ ನೀಲಕಂಠಸ್ವಾಮಿ ವೃತ್ತದಿಂದ ಸಿಂಗ್ರಿ ನಂಜಪ್ಪ ವೃತ್ತದವಗೆ ಕಾಲ್ನಡಿಗೆ ಜಾಥಾ ಆಗಮಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ ಅವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ದೇಶದಲ್ಲಿ ಆಗುತ್ತಿರುವ ದಿಢೀರ್ ಬೆಲೆ ಏರಿಕೆಯನ್ನು ಹತೋಟಿಗೆ ತರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕು. ಎಲ್ಲ ಕಾರ್ಮಿಕರಿಗೂ ಬೆಲೆ ಏರಿಕೆಗೆ ಅಮನುಗುಣವಾಗಿ ಕನಿಷ್ಠ ವೇತನ ₹26 ಸಾವಿರ ನಿಗದಿ ಮಾಡಬೇಕು. ಸುಮಾರು 29 ಕಾರ್ಮಿಕ ಕಾನೂನುಗಳು ಬಹಳ ವರ್ಷಗಳ ಹೋರಾಟದ ಫಲವಾಗಿ ದೊರೆತಿದ್ದನ್ನು ಯಥಾವತ್ತಾಗಿಸಬೇಕು. ಮಾರ್ಪಾಡಾದರೆ ಅದು ಕೇವಲ ಕಾರ್ಪೋರೇಟ್ ಕಂಪನಿಗಳಿಗೆ ಮಾತ್ರವೇ ಅನುಕೂಲವಾಗುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ ಕಾರ್ಯವನ್ನು ಮಾಡಬೇಕಿದೆ. ಕೇಂದ್ರ ಪ್ರತಿಯೊಂದು ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದ್ದು ಅದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಚಿಕ್ಕನಾಯಕನಹಳ್ಳಿ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಘು ಬಿಳಿಗೆರೆ ಮಾತನಾಡಿ, ಪುರಸಭೆಗಳಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದೆ. ಇದರಿಂದಾಗಿ ಕನಿಷ್ಠ ವೇತನವನ್ನು ಪಡೆದುಕೊಳ್ಳಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ನಗರಗಳನ್ನು ಸ್ವಚ್ಛವಾಗಿಸುವ ಪೌರ ಕಾರ್ಮಿಕರ ಬಗ್ಗೆ ಕಾಳಜಿ ವಹಿಸದಿರುವುದು ದುರಂತದ ಸಂಗತಿ. ಅದ್ದರಿಂದ ಕೂಡಲೇ ಪೌರ ಇಲಾಖೆಯ ಎಲ್ಲ ಹೊರಗುತ್ತಿಗೆ, ಗುತ್ತಿಗೆ ಆಧಾರದ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಬಿ.ಕೆ.ಸುನಂದ, ತುರುವೇಕೆರೆ ಅಧ್ಯಕ್ಷೆ ಕೆ.ವಸಂತ ಕುಮಾರಿ, ತಿಪಟೂರು ಅಧ್ಯಕ್ಷ ಬಿ.ಎಸ್.ಅನಸೂಯ, ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಶಂಕರಪ್ಪ, ಪ್ರಾಂತ ರೈತ ಸಂಘದ ಚನ್ನಬಸವಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು