ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದ್ದ ಕೊಬ್ಬರಿ ಬಾಕಿ ಹಣ ₹346.50 ಕೋಟಿಯನ್ನು 24,600 ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಸುಮಾರು 27 ಸಾವಿರ ರೈತರಿಂದ ಒಟ್ಟು 3.15 ಲಕ್ಷ ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಜಿಲ್ಲೆಯ ರೈತರಿಗೆ ಒಟ್ಟು ₹378 ಕೋಟಿ ಹಣ ಪಾವತಿಸಬೇಕಿತ್ತು. ಆಗಸ್ಟ್ 5ರ ವರೆಗೆ ₹346.50 ಕೋಟಿ ಜಮೆ ಮಾಡಿಸಲಾಗಿದೆ. ಶೇ 92ರಷ್ಟು ರೈತರಿಗೆ ಹಣ ಪಾವತಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಬಾಕಿ ಇರುವ 2,438 ರೈತರಿಗೆ ₹31.65 ಕೋಟಿ ಹಣವನ್ನು ಪಾವತಿಸಬೇಕಿದೆ. ಬಾಕಿ ಹಣವನ್ನೂ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಾಫೆಡ್‌ನಿಂದ ರಾಜ್ಯಕ್ಕೆ ₹691 ಕೋಟಿ ಹಣ ಬರಬೇಕಿದ್ದು, ಶೀಘ್ರ ಹಣ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
ಅಭಿನಂದನೆ: ಕೊಬ್ಬರಿ ಮಾರಾಟ ಮಾಡಿದ ರೈತರಿಗೆ ಹಣ ಬಿಡುಗಡೆಗೆ ಸಹಕರಿಸಿದ ಸಚಿವ ಸೋಮಣ್ಣ ಅವರನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿನಂದಿಸಿದ್ದಾರೆ.