ತಿಪಟೂರು: ಕಳೆದ ಕೆಲವು ವಾರಗಳಿಂದ ನಿಧಾನವಾಗಿ ಕೊಬ್ಬರಿ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಬುಧವಾರ ನಡೆದ ಹರಾಜಿನಲ್ಲಿ ಕ್ವಿಂಟಲ್ ₹12 ಸಾವಿರ ದಾಟಿದ್ದು, ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಶನಿವಾರದ ಹರಾಜಿಗೆ ಹೋಲಿಸಿದರೆ ಬುಧವಾರ ಒಂದೇ ದಿನ ಕ್ವಿಂಟಲ್‌ಗೆ ₹700 ಏರಿಕೆಯಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಕನಿಷ್ಠ ಕ್ವಿಂಟಲ್ ₹11,700 ಹಾಗೂ ಗರಿಷ್ಠ ₹12,222ಕ್ಕೆ ಮಾರಾಟವಾಗಿದೆ. ಗೌರಿ–ಗಣೇಶ, ದೀಪಾವಳಿ ಹಬ್ಬದ ವೇಳೆಗೆ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ಹಿಂದಿನ ವರ್ಷಗಳಷ್ಟು ಆವಕ ಬರುತ್ತಿಲ್ಲ. ಪ್ರಸ್ತುತ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕೊಬ್ಬರಿಯನ್ನು ಮಾರುಕಟ್ಟೆಗೆ ತರುತ್ತಿಲ್ಲ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ತೆಂಗಿನಕಾಯಿ ಒಣಗಿ ಕೊಬ್ಬರಿಯಾಗುವುದು ನಿಧಾನವಾಗುತ್ತಿದೆ. ಜತೆಗೆ ನಾಫೆಡ್ ಕೇಂದ್ರಗಳಲ್ಲಿ ಮಾರಾಟ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೊಬ್ಬರಿ ಬೆಲೆ ಕುಸಿಯುತ್ತಿರುವುದನ್ನು ಗಮನಿಸಿದ ರೈತರು, ಎಳನೀರು ಮಾರಾಟ ಮಾಡುತ್ತಿದ್ದು, ಕೊಬ್ಬರಿ ಮಾಡುತ್ತಿಲ್ಲ. ತೆಂಗು ಬೆಳೆ ವಿಸ್ತರಿಸುವ ಬದಲು, ಆ ಜಾಗವನ್ನು ನಿಧಾನವಾಗಿ ಅಡಿಕೆ ಬೆಳೆ ಆವರಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಆವಕ ಕಡಿಮೆಯಾಗುತ್ತಿದೆ.
ಕೇರಳ, ತಮಿಳುನಾಡು ಭಾಗದಲ್ಲಿ ಕೊಬ್ಬರಿ ಎಣ್ಣೆ ಉತ್ಪಾದಿಸುವ ಉದ್ಯಮಗಳ ಸಂಖ್ಯೆ ಹೆಚ್ಚಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಎಣ್ಣೆ ಅಂಶ ಹೊಂದಿರುವ ತಿಪಟೂರಿನ ಕೊಬ್ಬರಿ ಖರೀದಿಗೆ ಮುಂದಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಈ ಚಟುವಟಿಕೆ ಕಂಡು ಬಂದಿದೆ. ಆರೋಗ್ಯದ ದೃಷ್ಟಿಯಿಂದ ಸ್ಥಳೀಯವಾಗಿ ಕೊಬ್ಬರಿ ಎಣ್ಣೆಯನ್ನು ಅಡುಗೆ ಹಾಗೂ ಇತರೆ ಆಹಾರ ಪದಾರ್ಥ ತಯಾರಿಕೆಗೆ ಬಳಕೆ ಮಾಡುವುದು ಹೆಚ್ಚಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಹಬ್ಬದ ಸಮಯದಲ್ಲಿ ಬೇಡಿಕೆ ಉಂಟಾಗಿದ್ದು, ಕೊಬ್ಬರಿ ಬೆಲೆ ಏರಿಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆವಕ: ಎಪಿಎಂಸಿ ಮಾರುಕಟ್ಟೆಗೆ ಶನಿವಾರ 1,096 ಕ್ವಿಂಟಲ್ ಕೊಬ್ಬರಿ ಬಂದಿದ್ದರೆ, ಬುಧವಾರದ ಹರಾಜಿಗೆ 1,622 ಕ್ವಿಂಟಲ್ ಬಂದಿತ್ತು. ಬುಧವಾರ ಸುಮಾರು 2 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಬರುವ ನಿರೀಕ್ಷೆ ಇತ್ತು. ಆದರೆ ಅಷ್ಟು ಪ್ರಮಾಣದಲ್ಲಿ ಮಾಲು ಬರಲಿಲ್ಲ. ಸಹಜವಾಗಿ ಬೇಡಿಕೆ ಬಂದಿದ್ದರಿಂದ ಬೆಲೆಯೂ ಜಿಗಿತ ಕಂಡಿದೆ ಎಂದು ವರ್ತಕರೊಬ್ಬರು ತಿಳಿಸಿದರು.
ಮೂರು ವರ್ಷದ ಹಿಂದೆ ಕ್ವಿಂಟಲ್ ₹18 ಸಾವಿರದ ವರೆಗೂ ಏರಿಕೆಯಾಗಿತ್ತು. ನಂತರ ಇಳಿಕೆ ಕಂಡು, 2023 ಜನವರಿ ವೇಳೆಗೆ ತೀವ್ರವಾಗಿ ಕುಸಿದು, ₹10 ಸಾವಿರದ ಒಳಕ್ಕೆ ಬಂದಿತ್ತು. ನಂತರದ ದಿನಗಳಲ್ಲಿ ₹8 ಸಾವಿರದ ವರೆಗೂ ಕುಸಿದಿತ್ತು. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಆರಂಭವಾದ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತ್ತು. ಈಗ ಮೂರು ವಾರದಿಂದ ಏರಿಕೆಯತ್ತ ಮುಖ ಮಾಡಿದೆ.
- ಕೇರಳ ತಮಿಳುನಾಡಿನಲ್ಲಿ ಬೇಡಿಕೆ
ನಾಫೆಡ್ ಮೂಲಕ ಸಾಕಷ್ಟು ಕೊಬ್ಬರಿ ಖರೀದಿಯಾಗಿದೆ. ತಮಿಳುನಾಡು ಕೇರಳ ಭಾಗದಲ್ಲಿ ಎಣ್ಣೆ ತಯಾರಿಕೆಗೆ ತಿಪಟೂರು ಭಾಗದ ಕೊಬ್ಬರಿ ಖರೀದಿಸುತ್ತಿದ್ದಾರೆ. ಆರೋಗ್ಯದ ಕಾರಣಕ್ಕೆ ಸ್ಥಳೀಯರು ಅಡುಗೆ ತಯಾರಿಸಲು ಕೊಬ್ಬರಿ ಎಣ್ಣೆ ಬಳಕೆ ಮಾಡುವುದು ಹೆಚ್ಚುತ್ತಿದೆ. ಹಾಗಾಗಿ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ ತಿಳಿಸಿದರು.
- ಆತಂಕ ಗೊಂದಲವಿದೆ
ಅತಿರೇಕದ ಬೆಲೆ ಏರಿಕೆಯಿಂದ ಸಾಮಾನ್ಯ ರೈತರು ಆತಂಕ ಗೊಂದಲಕ್ಕೆ ಒಳಗಾಗುತ್ತಾರೆ. ತೆಂಗು ಬೆಳೆಗಾರರು ಬುದ್ಧಿವಂತಿಕೆಯಿಂದ ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರಾಟ ಮಾಡಬೇಕು. ದಿಢೀರನೆ ಬೆಲೆ ಏರಿಕೆಯಾಗಿದ್ದು ಇದರ ಆಳ ಉದ್ದವನ್ನು ಸರ್ಕಾರ ಹಾಗೂ ಅಧಿಕಾರಿಗಳು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹಸಿರು ಸೇನೆ ಅಧ್ಯಕ್ಷ ದೇವರಾಜು ತಿಮ್ಲಾಪುರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.