ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ರೋಗದಿಂದ ಶಿರಾದ ವ್ಯಕ್ತಿ ಸಾವು ಪ್ರಕರಣ: ಬೆಚ್ಚಿದ ಜನತೆ

Last Updated 27 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ತುಮಕೂರು: ಶಿರಾ ನಗರದ ವ್ಯಕ್ತಿ ಕೋವಿಡ್‌– 19 ರೋಗದಿಂದ ಮೃತಪಟ್ಟಿರುವ ಸುದ್ದಿ ಜಿಲ್ಲೆಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಕೊರೊನಾ ಸೋಂಕಿನ ಪ್ರಕರಣಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವರದಿಯಾಗುತ್ತಿದ್ದರೂ ತುಮಕೂರಿನಲ್ಲಿ ಯಾವುದೇ ಪ್ರಕರಣಗಳು ಇರಲಿಲ್ಲ.

ಆದರೆ ದಿಢೀರ್ ಬೆಳವಣಿಗೆಯಲ್ಲಿ ಈ ಸಾವಿನ ಸುದ್ದಿ ಕೇಳಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗ ಮೃತಪಟ್ಟ ವ್ಯಕ್ತಿಯ ಬಗ್ಗೆ ಎರಡು ದಿನಗಳ ಹಿಂದೆಯೇ ‘ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿರಾ ತಾಲ್ಲೂಕು ಆಡಳಿತ ಈ ವಿಚಾರದಲ್ಲಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿತ್ತು. ವದಂತಿಯನ್ನು ಖಚಿತಪಡಿಸಿರಲಿಲ್ಲ. ಐಸೊಲೇಷನ್‌ನಲ್ಲಿ ಇದ್ದಾರೆ. ವರದಿ ಬಂದ ನಂತರ ಮಾಹಿತಿ ನೀಡುವುದಾಗಿ ಜಿಲ್ಲಾ ಆಸ್ಪತ್ರೆ ಮೂಲಗಳು ತಿಳಿಸಿದ್ದವು.

ತುಮಕೂರಿನ 11 ಮಂದಿ ಹಾಗೂ ತಿ‍ಪಟೂರಿನ ಇಬ್ಬರು ನವದೆಹಲಿಯ ಜಾಮಿಯಾ ಮಸೀದಿ ಆಯೋಜಿಸಿದ್ದ ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮೃತರ ಜತೆ ತೆರಳಿದ್ದರು. ನಗರದ 11 ಜನರು ಸಹ ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಇದ್ದಾರೆ. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ನಗರದ ಜನರು ಭಯಗೊಂಡಿದ್ದಾರೆ. ಈ 11 ಮಂದಿ ಯಾರು, ಎಲ್ಲೆಲ್ಲಿ ಓಡಾಡಿದ್ದಾರೆ, ಇವರಿಗೂ ಸೋಂಕು ತಗುಲಿದೆಯೇ ಎನ್ನುವುದು ನಾಗರಿಕರ ಕುತೂಹಲಕ್ಕೆ ಕಾರಣವಾಗಿದೆ.

ಮೂವರು ವೈದ್ಯರ ಮೇಲೆ ನಿಗಾ: ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳು ಹಾಗೂ ಜಿಲ್ಲಾ ಆಸ್ಪತ್ರೆಯ ಒಬ್ಬ ವೈದ್ಯರ ಮೇಲೂ ನಿಗಾ ಇಡಲಾಗಿದೆ.

ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಿರುವ ನಗರದ ಜಲ್ಕಾ ಮಕಾನ್ ದರ್ಗಾದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ನಡೆಸುವ ತಂಡವು ಸಂಸ್ಕಾರ ಪ್ರಕ್ರಿಯೆಗಳ ಕುರಿತು ಸಮುದಾಯದವರಿಗೆ ತಿಳಿವಳಿಕೆ ನೀಡಿತು.

***

ಮೃತ ವ್ಯಕ್ತಿ ಓಡಾಡಿದ್ದ ಮಾಹಿತಿ

* ಮಾರ್ಚ್ 5ರಂದು ಮಧ್ಯಾಹ್ನ 2.30ಕ್ಕೆ ತುಮಕೂರಿನಿಂದ ಸಂಪರ್ಕ ಕ್ರಾಂತಿ ರೈಲಿನ ಎಸ್‌–6 ಬೋಗಿಯಲ್ಲಿ ನವದೆಹಲಿಗೆ ಪ್ರಯಾಣ.

* ಮಾರ್ಚ್ 7ರಿಂದ 11ರ ವರೆಗೆ ಮಸೀದಿಯಲ್ಲೇ ವಾಸ್ತವ್ಯ

* 11ರಂದು ಬೆಳಿಗ್ಗೆ 9ಕ್ಕೆ ನವದೆಹಲಿಯಿಂದ ಕೊಂಗು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊರಟು 14ರಂದು ಯಶವಂತಪುರ ತಲುಪಿದ್ದಾರೆ. ರೈಲಿನ ಎಸ್‌–19 ಬೋಗಿಯಲ್ಲಿ ಇವರು ಇದ್ದರು.

* 14ರಂದು ರಾತ್ರಿ 12.30ಕ್ಕೆ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಶಿರಾ ತಲುಪಿದ್ದಾರೆ. ಕೆಲ ದಿನ ಮನೆಯಲ್ಲೇ ತಂಗಿದ್ದಾರೆ.

* 18ರಂದು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದೆ. 21ರ ವರೆಗೆ ಶಿರಾದ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ.

* 23ರಂದು ಹೊರರೋಗಿಯಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು.

* 24ರಂದು ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ. ಗಂಟಲು ದ್ರವ ಮತ್ತು ಕಫ, ರಕ್ತದ ಮಾದರಿ ಪರೀಕ್ಷೆ.

* 26ರಂದು ರಾತ್ರಿ ಬಂದ ವರದಿ.

* ಮಾರ್ಚ್ 27ರಂದು ಬೆಳಿಗ್ಗೆ ಸಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT