ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಡೆ: ಡಿಸಿ, ಎಸ್‌ಪಿ ದಾಳಿ

Last Updated 19 ಏಪ್ರಿಲ್ 2021, 4:17 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೋವಿಡ್–19 ನಿಯಮ ಪಾಲನೆ ಪರಿಶೀಲನೆಗೆ ಜಿಲ್ಲಾ ಆಡಳಿತವೇ ಈಗ ಕಾರ್ಯಾಚರಣೆಗೆ ಇಳಿದಿದೆ.

ಜಿಲ್ಲಾ ಆಡಳಿತ, ಪೊಲೀಸ್, ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ಜಂಟಿ ಕಾರ್ಯಾಚರಣೆಗೆ ಇಳಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ನೇತೃತ್ವದಲ್ಲಿ ಭಾನುವಾರ ನಗರದ ಎಂ.ಜಿ.ರಸ್ತೆಯಲ್ಲಿ ಕಾರ್ಯಾಚರಣೆ ನಡೆಯಿತು.

ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದವರಿಗೆ ದಂಡ ವಿಧಿಸಲಾಯಿತು. ವಾಣಿಜ್ಯ ಮಳಿಗೆಗಳಲ್ಲಿ ನಿಯಮ ಪಾಲನೆ ಮಾಡದವರಿಂದಲೂ ಇದೇ ಸಂದರ್ಭದಲ್ಲಿ ದಂಡ ವಸೂಲಿ ಮಾಡಲಾಯಿತು. ಕೆಲವರಿಗೆ ಎಚ್ಚರಿಕೆ ನೀಡಲಾಯಿತು. ಕಂದಾಯ, ಪೊಲೀಸ್, ಪಾಲಿಕೆ ಸಿಬ್ಬಂದಿ ದಂಡ ವಸೂಲಿ ಮಾಡಿದರು.

ಮಾಸ್ಕ್ ಧರಿಸದವರನ್ನು ಗಮನಿಸಿದ ಜಿಲ್ಲಾಧಿಕಾರಿ ತಿಳಿವಳಿಕೆ ಹೇಳಿದರು. ಅಂತಹವರಿಗೆ ಮಾಸ್ಕ್‌ಗಳನ್ನು ನೀಡಿ ಜಾಗೃತಿಮೂಡಿಸಿ, ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು. ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಮನದಟ್ಟು ಮಾಡಿಕೊಟ್ಟರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಬಗ್ಗೆ ಜನರನ್ನು ಎಚ್ಚರಿಸಿದರು. ಜನರು ಸಹಕಾರ ನೀಡಿದರೆ ಮಾತ್ರ ನಿಯಂತ್ರಣ ಸಾಧ್ಯವಾಗಲಿದೆ. ಇಲ್ಲವಾದರೆ ಮತ್ತಷ್ಟು ಜನರಿಗೆ ಸೋಂಕು ತಗುಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು– ನೋವು ಸಂಭವಿಸುತ್ತದೆ. ಎಚ್ಚರಿಕೆ, ಜಾಗೃತಿ ವಹಿಸುವುದರಿಂದ ನಿಯಂತ್ರಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಕೋವಿಡ್ ನಿಯಮ ಪಾಲಿಸುವಂತೆ ಈವರೆಗೂ ಜಾಗೃತಿ ಮೂಡಿಸಿದ್ದರೂ ಪಾಲನೆಯಾಗುತ್ತಿಲ್ಲ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಗಮನಿಸಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೆ ಅಂತಹ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಪಾಟೀಲ ಎಚ್ಚರಿಸಿದರು.

‘ನಗರ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೇನ್‌ಮೆಂಟ್ ವಲಯಗಳನ್ನು ಗುರುತಿಸಿ, ಅಂತಹ ಕಡೆಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ಹೆಚ್ಚು ಜನರಿಗೆ ಲಸಿಕೆ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಅವರು ತಿಳಿಸಿದರು.

‘ಕೋವಿಡ್ ನಿಯಮ ಪಾಲನೆ ಮಾಡದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಯಾಣ ಮಂಟಪಗಳ ಮೇಲೂ ದಾಳಿ ಮಾಡಲಾಗುತ್ತಿದೆ. ನಿಯಮ ಪಾಲಿಸದ ಹವಾನಿಯಂತ್ರಿತ ವಾಣಿಜ್ಯ ಮಳಿಗೆಗಳಿಗೆ ₹10 ಸಾವಿರ, ಸಾಮಾನ್ಯ ವಾಣಿಜ್ಯ ಮಳಿಗೆಗಳಿಗೆ ₹5 ಸಾವಿರ ದಂಡ ವಿಧಿಸಲಾಗುತ್ತಿದೆ’ ಎಂದು ಕೆ.ವಂಶಿಕೃಷ್ಣ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಯೋಜನಾ ನಿರ್ದೇಶಕಿ ಶುಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT