ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಡೆಗೆ ಒಗ್ಗೂಡಿ ಹೋರಾಟ

ಆರ್.ಆರ್.ಅಭಿಮಾನಿ ಬಳಗದ ದಾಸೋಹ ವ್ಯವಸ್ಥೆ ವೀಕ್ಷಿಸಿದ ಸಂಸದ
Last Updated 8 ಏಪ್ರಿಲ್ 2020, 14:26 IST
ಅಕ್ಷರ ಗಾತ್ರ

ತುಮಕೂರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಅವರ ಹೆಸರಿನ ಆರ್.ಆರ್.ಅಭಿಮಾನಿ ಬಳಗ ನಿತ್ಯ 2,000 ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಿದೆ. ಇದು ಶ್ಲಾಘನೀಯ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ನಗರದಲ್ಲಿ ಬುಧವಾರ ಆರ್.ಆರ್.ಅಭಿಮಾನಿ ಬಳಗವು ನಿರಾಶ್ರಿತರಿಗೆ, ಅಸಹಾಯಕರಿಗೆ ಹಮ್ಮಿಕೊಂಡಿದ್ದ ಊಟದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.

ಬಳಗದಿಂದ ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಬಡವರಿಗೆ, ಕೂಲಿಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಸೋಂಕು ದೂರ ಮಾಡಲು ನಾವು ಒಗ್ಗೂಡಿ ಪ್ರಯತ್ನಿಸಬೇಕು. ರಾಜಣ್ಣ ಮತ್ತು ರಾಜೇಂದ್ರ ಅವರ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.

ಕೆ.ಎನ್.ರಾಜಣ್ಣ ಮಾತನಾಡಿ, ‘ಜನರಿಗೆ ಏನು ಅವಶ್ಯಕತೆ ಇದೆ ಎಂಬುದನ್ನು ಅರಿತು ಊಟದ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ವೈದ್ಯರು, ವೈದ್ಯಕೀಯ ಸಿಬ್ಬಂದಿ ತಮ್ಮ ಜೀವನ ಪಣಕ್ಕಿಟ್ಟು ಚಿಕಿತ್ಸೆ ಕೊಡುತ್ತಿದ್ದಾರೆ. ಅವರನ್ನು ಅಭಿನಂದಿಸಬೇಕು’ ಎಂದರು.

ಇಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಸೇವಾ ಮನೋಭಾವ ಈ ಯುವಕರಲ್ಲಿ ಬೆಳೆಯಲಿ ಎಂದು ಹೇಳಿದರು.

ಕೊರೊನಾ ಸೋಂಕಿನ ಕಾರಣಕ್ಕೆ ಒಂದು ಸಮುದಾಯವನ್ನು ದ್ವೇಷ ಮಾಡುವ ರೀತಿಯಲ್ಲಿ ಬೆಳವಣಿಗೆಗಳು ಆಗುತ್ತಿವೆ. ಇದು ಆಗಬಾರದು. ಜಾತಿ ನೋಡಿ ರೋಗ ಬರುವುದಿಲ್ಲ. ಒಂದು ಸಮುದಾಯ ಗುರಿಯಾಗಿಸಿ ದೂಷಿಸುವುದು ತರವಲ್ಲ ಎಂದು ತಿಳಿಸಿದರು.

ಎಲ್ಲ ವಿಎಸ್‍ಎಸ್‍ಎನ್ ಸೊಸೈಟಿಗಳಲ್ಲಿ ಪಡಿತರ ವಿತರಿಸಲಾಗುತ್ತಿದೆ. ಮಾಸ್ಕ್ ಧರಿಸಿ ಪಡಿತರ ನೀಡಬೇಕು ಎಂದು ಸೂಚಿಸಲಾಗಿದೆ. ಈಗಾಗಲೇ 1 ಲಕ್ಷ ಮಾಸ್ಕ್‌ ತರಿಸಿ 50 ಸಾವಿರ ಮಾಸ್ಕ್‌ಗಳನ್ನು ಮಧುಗಿರಿ ತಾಲ್ಲೂಕಿನಲ್ಲಿ ಸೊಸೈಟಿ ಮೂಲಕ ಹಂಚಲಾಗಿದೆ. ಉಳಿದವುಗಳನ್ನು ಜಿಲ್ಲೆಯಾದ್ಯಂತ ಹಂಚಲಾಗುವುದು. ಮಾಸ್ಕ್‌ಗಳಿಗೆ ಎಷ್ಟೇ ಬೇಡಿಕೆ ಬಂದರೂ ಪೂರೈಸಲು ಸಿದ್ಧ ಎಂದು ನುಡಿದರು.

ಆರ್.ರವೀಂದ್ರ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‍ ಕುಮಾರ್, ಕಂದಾಯ ಅಧಿಕಾರಿ ಜಯಪ್ರಕಾಶ್, ಕಲ್ಲಳ್ಳಿ ದೇವರಾಜ್, ಆರ್.ಆರ್.ಅಭಿಮಾನಿ ಬಳಗದ ರಾಜೇಶ್ ದೊಡ್ಮನೆ, ಶಶಿ ಹುಲಿಕುಂಟೆ ಇದ್ದರು.

ಆಹಾರ ತಪಾಸಣೆ ನಂತರ ವಿತರಣೆ
ಮಾರ್ಚ್ 26ರಿಂದ ಆರ್.ಆರ್.ಅಭಿಮಾನಿ ಬಳಗ ಬೆಳಿಗ್ಗೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದೆ. ತೀರಾ ಕಷ್ಟಕ್ಕೆ ಸಿಲುಕಿದವರಿಗೆ ಊಟ ನೀಡಲಾಗುತ್ತಿದೆ. ವಿತರಣೆಗೂ ಮೊದಲು ಆರೋಗ್ಯ ಇಲಾಖೆ ಅಧಿಕಾರಿಗಳಿಂದ ತಪಾಸಣೆ ನಡೆಸಿ ಅವರು ದೃಢೀಕರಣ ನೀಡಿದ ನಂತರ ವಿತರಿಸಲಾಗುತ್ತಿದೆ ಎಂದು ಆರ್‌.ರಾಜೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT