ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರಕ್ತ ಸಂಗ್ರಹಕ್ಕೆ ವಾಹನವೇ ಆಶ್ರಯ!

ಶಿಬಿರಗಳು ನಡೆಯದೆ ರಕ್ತಕ್ಕೆ ಕೊರತೆ; ಖಾಸಗಿ ಆಸ್ಪತ್ರೆಗಳಲ್ಲಿಯೂ ಇದೇ ಪರಿಸ್ಥಿತಿ
Last Updated 10 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ‘ರಕ್ತ ಸಂಗ್ರಹ’ ಗಣನೀಯವಾಗಿ ಕುಸಿದಿದೆ. ಇದು ರಕ್ತದ ಅಭಾವಕ್ಕೂ ದಾರಿಯಾಗಿದೆ.

ಸಮಸ್ಯೆ ಮನಗಂಡು ಜಿಲ್ಲಾ ರಕ್ತನಿಧಿ ಕೇಂದ್ರವು ಈಗ ತನ್ನ ‘ರಕ್ತನಿಧಿ’ ವಾಹನದ ಮೂಲಕ ರಕ್ತ ಸಂಗ್ರಹಕ್ಕೆ ಮುಂದಾಗಿದೆ. ಸ್ವಲ್ಪ ಮಟ್ಟಿಗೆ ಜನದಟ್ಟಣೆ ಇರುವ ಪ್ರದೇಶಗಳು, ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗಳು, ಮಾರುಕಟ್ಟೆ– ಹೀಗೆ ಜನರು ಸೇರುವ ಕಡೆಗಳಲ್ಲಿ ವಾಹನ ನಿಲ್ಲಿಸಿ ದಾನಿಗಳಿಂದ ರಕ್ತ ಸಂಗ್ರಹಿಸುತ್ತಿದೆ.

ರಕ್ತದ ಕೊರತೆ ಮನಗಂಡ ಶಾಸಕ ಬಿ.ಜಿ.ಜ್ಯೋತಿಗಣೇಶ್, ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ತಮ್ಮ ಶಾಸಕರ ಕಚೇರಿ ಬಳಿಗೆ ವಾಹನ ಕರೆಸಿ ರಕ್ತ ಸಂಗ್ರಹಿಸಿಕೊಟ್ಟಿದ್ದಾರೆ.

ನಗರದ ವಿವಿಧ ಭಾಗಗಳಿಗೆ ತೆರಳುತ್ತಿರುವ ರಕ್ತನಿಧಿ ಕೇಂದ್ರದ ಸಿಬ್ಬಂದಿ ಈ ವಾಹನದಲ್ಲೇ ರಕ್ತ ಸಂಗ್ರಹಿಸುತ್ತಿದ್ದಾರೆ. ಇಂದಿನ ತುರ್ತು ಪರಿಸ್ಥಿತಿಯಲ್ಲಿ ದಾನಿಗಳಿಂದ ರಕ್ತ ಸಂಗ್ರಹಿಸಲು ಈ ವಾಹನ ಸೇತುವೆಯಾಗಿದೆ.

ಲಾಕ್‌ಡೌನ್‌ ಮುನ್ನವೂ ಈ ವಾಹನವನ್ನು ಪೂರ್ವ ನಿಗದಿತ ರಕ್ತದಾನ ಶಿಬಿರಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಪೂರ್ವನಿಗದಿತ ಶಿಬಿರಗಳು ಇಲ್ಲದ ಕಾರಣ ವಾಹನದಲ್ಲಿಯೇ ‘ಶಿಬಿರ’ಗಳನ್ನು ನಡೆಸಲಾಗುತ್ತಿದೆ.

ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ಮಾಸಿಕ 400ರಿಂದ 500 ಯುನಿಟ್ ರಕ್ತವನ್ನು ರೋಗಿಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಈ ಪ್ರಮಾಣದಲ್ಲಿ ಸಂಗ್ರಹ ಸಾಧ್ಯವಾಗುತ್ತಿಲ್ಲ.

ಸಾಮಾನ್ಯವಾಗಿ ಬೇಡಿಕೆ ನೋಡಿಕೊಂಡು ಶಿಬಿರಗಳನ್ನು ರಕ್ತನಿಧಿ ಕೇಂದ್ರ ಸಂಘಟಿಸುತ್ತದೆ. ಸರಾಸರಿ ತಿಂಗಳಿಗೆ ಐದಾರು ಶಿಬಿರಗಳನ್ನು ಹಮ್ಮಿಕೊಳ್ಳುತ್ತಿತ್ತು. ಈಗ ರಕ್ತ ಬೇಕು ಅಂದರೂ ದಾನಿಗಳು ಬರುವುದು ಕಷ್ಟವಾಗಿದೆ. ಪೊಲೀಸರ ಬಿಗಿ ನಿಯಮಗಳ ಕಾರಣಕ್ಕೂ ದಾನಿಗಳು ರಕ್ತ ನೀಡಲು ಸಾಧ್ಯವಾಗುತ್ತಿಲ್ಲ.

ಸಾಮಾನ್ಯ ದಿನಗಳಲ್ಲಿ ರಾಜಕಾರಣಿಗಳು, ಚಿತ್ರನಟರ ಜನ್ಮದಿನದ ವೇಳೆ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದರು. ಸಂಗ್ರಹಿಸುತ್ತಿದ್ದ ರಕ್ತವನ್ನು ಜಿಲ್ಲಾ ರಕ್ತನಿಧಿ ಕೇಂದ್ರಕ್ಕೂ ನೀಡುತ್ತಿದ್ದರು. ಇದೀಗ ಸೋಂಕು ಹರಡುವ ಭೀತಿಯಿಂದಾಗಿ ಶಿಬಿರಗಳು ಬಂದ್ ಆಗಿವೆ. ಖಾಸಗಿ ಆಸ್ಪತ್ರೆಗಳ ರಕ್ತನಿಧಿ ಕೇಂದ್ರಗಳಲ್ಲಿಯೂ ರಕ್ತದ ಸಂಗ್ರಹ ತೀವ್ರವಾಗಿ ಕಡಿಮೆ ಇದೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ
ಇತ್ತೀಚೆಗೆ ಕುಣಿಗಲ್ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲ್ಲಿಸಿದ್ದೆವು. ಒಂದೊಂದು ಕಡೆ ಐದು, ಆರು ಯುನಿಟ್ ಸಂಗ್ರಹವಾಯಿತು ಎಂದು ಮಾಹಿತಿ ನೀಡುವರು ಜಿಲ್ಲಾ ರಕ್ತನಿಧಿ ಕೇಂದ್ರದ ಡಾ.ವೀಣಾ.

‘ಜಿಲ್ಲಾ ಆಸ್ಪತ್ರೆಯನ್ನು ಶ್ರೀದೇವಿ ವೈದ್ಯಕೀಯ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿನ ರಕ್ತದ ನಿಧಿಯಲ್ಲಿ ಕೊರತೆಯಾದಾಗ ಇಲ್ಲಿಂದ ಪಡೆಯುತ್ತಿದ್ದಾರೆ. ಬೇಡಿಕೆಯೂ ತಗ್ಗಿರುವ ಕಾರಣ ಕೇಂದ್ರದಲ್ಲಿ ಸದ್ಯ ರಕ್ತಕ್ಕೆ ತೀವ್ರ ಅಭಾವ ಎದುರಾಗಿಲ್ಲ. ಗರ್ಭಿಣಿಯರು ಸೇರಿದಂತೆ ಅಗತ್ಯವುಳ್ಳವರಿಗೆ ಮಾತ್ರ ರಕ್ತದ ಅವಶ್ಯಕತೆ ಇದೆ’ ಎಂದರು.

ಅವಶ್ಯಕತೆ ಹೆಚ್ಚಿರುವ ಕಾಲ
‘ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ವರೆಗೆ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚು’ ಎಂದು ಬೆಳ್ಳಿ ರಕ್ತನಿಧಿ ಕೇಂದ್ರದ ಬೆಳ್ಳಿ ಲೋಕೇಶ್ ಹೇಳಿದರು

‘ವಾತಾವರಣ ತಂಪು ಇದ್ದರೆ ಗಾಯ ವಾಸಿಯಾಗುವುದಿಲ್ಲ, ನೋವು ಹೆಚ್ಚುತ್ತದೆ ಎನ್ನುವ ನಂಬಿಕೆಯಿಂದ ಹಳ್ಳಿ ಜನರು ಮಳೆಗಾಲ ಮತ್ತು ಚಳಿಗಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಿಂಜರಿಯುವರು. ಬೇಸಿಗೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವರು. ಹೀಗೆ ಮಾಡಿಸಿಕೊಳ್ಳುವವರು ರಕ್ತದ ಕೊರತೆ ಕಾರಣಕ್ಕೆ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಿರುವ ನಿದರ್ಶನಗಳು ಇವೆ’ ಎಂದರು.

‘ರಕ್ತಬೇಕು ಎಂದು ಕೆಲವರು ನಮ್ಮ ಬಳಿ ಬರುತ್ತಿದ್ದಾರೆ. ಕೆಲವರು ತಮ್ಮ ಸಂಬಂಧಿಕರಲ್ಲಿಯೇ ರಕ್ತ ಪಡೆಯುತ್ತಿದ್ದಾರೆ. ತೀವ್ರ ರಕ್ತದ ಅವಶ್ಯಕತೆ ಇದ್ದವರು ನಮ್ಮನ್ನು ಸಂಪರ್ಕಿಸಬಹುದು’ ಎಂದು ಹೇಳಿದರು. ಬೆಳ್ಳಿ ಲೋಕೇಶ್ ಸಂಪರ್ಕಕ್ಕೆ 9743499991.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT