ಬುಧವಾರ, ಆಗಸ್ಟ್ 17, 2022
30 °C
ಉದ್ಯೋಗ ಮೀಸಲಾತಿಗೆ ಬಲಿಜಿಗರ ಒತ್ತಾಯ

ನಿಗಮ: ತಿಗಳ, ಒಕ್ಕಲಿಗರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಲಿಂಗಾಯತರ ಅಭಿವೃದ್ಧಿ ನಿಗಮ ಸ್ಥಾಪನೆಯ ನಂತರ ವಿವಿಧ ಸಮುದಾಯಗಳು ತಮಗೂ ನಿಗಮ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ. ಮುಖ್ಯಮಂತ್ರಿಗೆ ಪತ್ರ ಬರೆದು, ಮನವಿ ಸಲ್ಲಿಸಿ ಆಗ್ರಹಿಸಿವೆ.

ತಿಗಳರ ಆಗ್ರಹ: ತಿಗಳರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಜನಾಂಗವನ್ನು ಪ್ರವರ್ಗ– 2ಎ ಮೀಸಲಾತಿಯಿಂದ ಪ್ರವರ್ಗ– 1ಕ್ಕೆ ಬದಲಾಯಿಸುವಂತೆ ತಿಗಳರ (ಅಗ್ನಿವಂಶ ಕ್ಷತ್ರಿಯ) ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಹನುಮದಾಸ್, ಕಾರ್ಯದರ್ಶಿ ಬಿ.ಎಂ.ಗಂಗರಾಜು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗದವರಿದ್ದಾರೆ. ಬಹುತೇಕರು ಅತ್ಯಲ್ಪ ಪ್ರಮಾಣದಲ್ಲಿ ಜಮೀನು ಹೊಂದಿದ್ದು, ಹೂವು, ಹಣ್ಣು, ತರಕಾರಿ ಬೆಳೆದು ಬೀದಿಗಳಲ್ಲಿ ತಲೆ ಮೇಲೆ ಹೊತ್ತು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸಣ್ಣ, ಪುಟ್ಟ ವ್ಯವಹಾರಕ್ಕೂ ಬಂಡವಾಳ ಇಲ್ಲವಾಗಿದೆ. ಸಮುದಾಯದಲ್ಲಿ ವಿದ್ಯಾ ಭ್ಯಾಸದ ಮಟ್ಟವೂ ಶೇ 2ರಷ್ಟು ಇದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸಾಮ ರ್ಥ್ಯವೂ ಇಲ್ಲವಾಗಿದೆ ಎಂದು ಮುಖ್ಯ ಮಂತ್ರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಐಎಎಸ್, ಐಪಿಎಸ್ ಅಧಿಕಾರಿಗಳು ಇಲ್ಲ, ಮೂರುನಾಲ್ಕು ಮಂದಿ ಕೆಎಎಸ್ ಅಧಿಕಾರಿಗಳು ಇದ್ದಾರೆ. ಉನ್ನತ ಹುದ್ದೆಗಳಲ್ಲೂ ಇಲ್ಲ. ಪ್ರವರ್ಗ– 2ಎ ಮೀಸಲಾತಿಯಲ್ಲಿ ಸಾಕಷ್ಟು ಜಾತಿಗಳಿದ್ದು, ಬಹುಸಂಖ್ಯಾತರು ಉದ್ಯೋಗ ಅವಕಾಶಗಳನ್ನು ಪಡೆದು
ಕೊಳ್ಳುತ್ತಿದ್ದಾರೆ. ಹಾಗಾಗಿ ಪ್ರವರ್ಗ– 1ಕ್ಕೆ ಸೇರ್ಪಡೆ ಮಾಡಿದರೆ ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಎಲ್ಲಾ ವಿಧದಲ್ಲೂ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ‘ತಿಗಳ ಜನಾಂಗದ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆ: ಕರ್ನಾಟಕ ಅಗ್ನಿಬನ್ನಿರಾಯ ತಿಗಳ ಮಹಾಸಭಾ ನೇತೃತ್ವದಲ್ಲಿ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಮಂಗಳವಾರ ಸಮುದಾಯದ ಮುಖಂಡರ ಸಭೆ ನಡೆಯಿತು. ನಿಗಮ ಸ್ಥಾಪನೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಮುಖಂಡರಾದ ಎಂ.ಆಂಜನೇಯ, ಟಿ.ಎನ್.ನಾರಾಯಣಸ್ವಾಮಿ ಇತರರು ಪಾಲ್ಗೊಂಡಿದ್ದರು.

ಒಕ್ಕಲಿಗರ ಒತ್ತಡ: ಒಕ್ಕಲಿಗರ ನಿಗಮ– ಪ್ರಾಧಿಕಾರ ಸ್ಥಾಪಿಸುವಂತೆ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಬಿ.ಬೋರೇಗೌಡ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿ ಇದ್ದು, ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಇಡೀ ಸಮಾಜಕ್ಕೆ ಅನ್ನ ನೀಡುತ್ತಿದ್ದಾರೆ. ಬೆಂಗಳೂರು ರಾಜಧಾನಿ ಯಾಗಲು, ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಳ್ಳಲು ಒಕ್ಕಲಿಗ ಸಮುದಾ ಯದ ಕೊಡುಗೆ ಅಪಾರ ಎಂದಿದ್ದಾರೆ.

ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಂಕಷ್ಟದಲ್ಲಿ ಇದ್ದಾರೆ. ಸಮುದಾಯ ಅಭಿವೃದ್ಧಿ ಸಲುವಾಗಿ ನಿಗಮ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಲಿಜಿಗರ ಒತ್ತಾಯ: ಬಲಿಜ ಜನಾಂಗಕ್ಕೆ 2ಎ ಉದ್ಯೋಗ ಮೀಸಲಾತಿ ನೀಡಬೇಕು. ಕೈವಾರ ಯೋಗಿ ನಾರೇಯಣ ಯತೀಂದ್ರರ ಜಯಂತಿ ಯನ್ನು ಸರ್ಕಾರವೇ ಆಚರಣೆ ಮಾಡ ಬೇಕು ಎಂದು ಸಮುದಾಯದ ಮುಖಂಡ
ಟಿ.ಆರ್.ಸುರೇಶ್ ಆಗ್ರಹಿಸಿದ್ದಾರೆ.

ಹೂವು, ಬಳೆ, ಅರಿಸಿನ, ಕುಂಕುಮದಂತಹ ಮಂಗಳ ದ್ರವ್ಯ, ಪೂಜಾ ಸಾಮಗ್ರಿಗಳನ್ನು ಹೊತ್ತು ಊರಿಂದೂರಿಗೆ ಅಲೆದಾಡುತ್ತಾ ವ್ಯಾಪಾರ ಮಾಡಿ ಜನಾಂಗದವರು ಜೀವನ ಮಾಡುತ್ತಿದ್ದಾರೆ. ಪ್ರವರ್ಗ– 2ಎನಲ್ಲಿ ಶಿಕ್ಷಣ ಮೀಸಲಾತಿ ನೀಡಲಾಗಿದೆ. ಆದರೆ ಉದ್ಯೋಗಕ್ಕೂ ಪ್ರವರ್ಗ–2ಎನಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.