ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಯಂತ್ರ ಬಳಕೆಯಿಂದ ಖರ್ಚು ವೆಚ್ಚ ಕಡಿಮೆ

ಗಾಜಿನ ಮನೆ: ದಕ್ಷಿಣ ಭಾರತ ಅಗ್ರೋ ಎಕ್ಸ್‌ಪೋ ಉದ್ಘಾಟಿಸಿದ ಮೇಯರ್ ಲಲಿತಾ ರವೀಶ್
Last Updated 19 ಜುಲೈ 2019, 19:42 IST
ಅಕ್ಷರ ಗಾತ್ರ

ತುಮಕೂರು: ‘ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಯಂತ್ರೋಪಕರಣಗಳನ್ನು ಬಳಸುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಬಹುದು’ ಎಂದು ಮೇಯರ್ ಲಲಿತಾ ರವೀಶ್ ಸಲಹೆ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ), ಜಿಲ್ಲಾ ಕೈಗಾರಿಕಾ ಕೇಂದ್ರ, ಮತ್ತಿತರ ಸರ್ಕಾರಿ ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಗಾಜಿನಮನೆಯಲ್ಲಿ ನಡೆದ ದಕ್ಷಿಣ ಭಾರತ ಆಗ್ರೋ ಎಕ್ಸ್‌ಪೋ ಕೃಷಿ ಮತ್ತು ಪೂರಕ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೃಷಿ ಚಟುವಟಿಕೆಯನ್ನೇ ಜೀವನಾಧಾರವನ್ನಾಗಿಸಿಕೊಂಡ ರೈತರಿಗೆ ಈ ಕೃಷಿ ಪೂರಕ ವಸ್ತುಪ್ರದರ್ಶನ ಪ್ರಯೋಜನವಾಗಲಿದೆ’ ಎಂದು ಹೇಳಿದರು.

’ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿ ಹಾಗೂ ಸಣ್ಣ ಕೈಗಾರಿಕೆಗಳು ಬಹುದೊಡ್ಡ ಪಾತ್ರವಹಿಸುತ್ತವೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯಿರುವ ಈ ಕಾಲದಲ್ಲಿ ಯಂತ್ರೋಪಕರಣ ಬಳಕೆ ಮಾಡಲೇಬೇಕಾಗಿದೆ’ ಎಂದು ಹೇಳಿದರು.

ಸಣ್ಣ ಕೈಗಾರಿಕೋದ್ಯಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ.ಪ್ರಕಾಶ್ ಮಾತನಾಡಿ, ‘ಜುಲೈ 21ರವರೆಗೆ ನಡೆಯುವ ಈ ಪ್ರದರ್ಶನದ ಸದುಪಯೋಗವನ್ನು ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಯ ರೈತರು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

’ರೈತರಿಗಷ್ಟೇ ಅಲ್ಲದೆ ಯುವಕ-ಯುವತಿಯರನ್ನು ಕೃಷಿ ಕ್ಷೇತ್ರದತ್ತ ಸೆಳೆಯಲು ಹಲವಾರು ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಂಡು ಅವರಿಗೆ ಉದ್ಯೋಗಾವಕಾಶವನ್ನು ಹೊಂದುವಂತಹ ಸಲಹೆಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.

ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ವಲಯ ಪ್ರಧಾನ ವ್ಯವಸ್ಥಾಪಕ ಪಿ.ರವಿಕುಮಾರ್ ಮಾತನಾಡಿ, ‘ಗ್ರಾಮೀಣ ಪ್ರದೇಶದ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಆದಾಯ ಗಳಿಸಲು ಕಾಸಿಯಾ ಏರ್ಪಡಿಸಿರುವ ಈ ಪ್ರದರ್ಶನ ಬಹುಪಯೋಗಿಯಾಗಿದೆ. ಇಂತಹ ಕೃಷಿ ಪೂರಕ ವಸ್ತುಪ್ರದರ್ಶನಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಆಯೋಜಿಸುವ ಮೂಲಕ ಕೃಷಿಕರಿಗೆ ಉತ್ತೇಜನ ನೀಡಬೇಕು’ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ವೈ.ಟಿ. ನಾಗರಾಜ್ ಮಾತನಾಡಿ, ‘ಈ ಆಗ್ರೋ ಎಕ್ಸ್‌ಪೋ ಪ್ರದರ್ಶನದಲ್ಲಿ ಕೃಷಿ ಹಾಗೂ ಸಣ್ಣ ಕೈಗಾರಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದೆ ಹಾಗೂ ರೈತರಷ್ಟೇ ಅಲ್ಲದೆ ನಿರುದ್ಯೋಗಿ ಯುವಕ-ಯುವತಿಯರಿಗೆ ಕೃಷಿ ಹಾಗೂ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಬಲ್ಲದು’ ಎಂದು ಹೇಳಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಉಪಾಧ್ಯಕ್ಷ ಕೆ.ಬಿ.ಅರಸಪ್ಪ ಮಾತನಾಡಿ, ‘ನಮ್ಮ ರೈತರಿಗೆ ಆಧುನಿಕ ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಬೇಕು. ಈ ಉದ್ದೇಶದಿಂದ ಈ ಹಿಂದೆ ಬೆಳಗಾವಿ, ಮೈಸೂರಿನಲ್ಲಿ ಕೃಷಿ ಪ್ರದರ್ಶನ ಆಯೋಜಿಸಲಾಗಿತ್ತು. ಅನೇಕ ರೈತರು ಪ್ರಯೋಜನ ಪಡೆದಿದ್ದಾರೆ’ ಎಂದರು.

ಕಾಸಿಯಾ ಸಂಸ್ಥೆಯ ಅಧ್ಯಕ್ಷ ಆರ್.ರಾಜು, ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜಗೋಪಾಲ, ಜಂಟಿ ಕಾರ್ಯದರ್ಶಿ ಟಿ.ಎಂ. ವಿಶ್ವನಾಥ್‌ರೆಡ್ಡಿ, ಖಜಾಂಚಿ ಎಸ್.ಎಂ.ಹುಸೇನ್, ಸೌತ್ ಆಗ್ರೋ ಎಕ್ಸ್‌ಪೋ ಉಪಾಧ್ಯಕ್ಷ ಬೋರೆಗೌಡ, ಸಂಸ್ಥೆಯ ಗ್ರಾಮೀಣಾಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಸದಾಶಿವ ಆರ್.ಅಮಿನ್, ತುಮಕೂರು ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್. ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT