ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಜನಾಂದೋಲನ ಕಾರ್ಯಕ್ರಮ

ಕಾರ್ಪೊರೇಟ್ ಕಂಪನಿಗೆ ದೇಶ ಮಾರಾಟ ಆರೋಪ: ಸರ್ಕಾರದ ವಿರುದ್ಧ ಸಿಪಿಐ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ದೇಶದ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದ ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧೀಜಿ ಚಲೇಜಾವ್ ಚಳವಳಿ ಆರಂಭಿಸಿದಂತೆ, ಈಗ ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರಗಳ ವಿರುದ್ಧ ಅಧಿಕಾರ ಬಿಟ್ಟು ತೊಲಗಿ ಹೋರಾಟ ಆರಂಭಿಸಲಾಗಿದೆ’ ಎಂದು ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ಜೋತಿ ಅನಂತಸುಬ್ಬರಾವ್ ತಿಳಿಸಿದರು.

ತಾಲ್ಲೂಕಿನ ಮಲ್ಲಸಂದ್ರದಲ್ಲಿ ಸಿಪಿಐ, ಎಐಟಿಯುಸಿ ಹಮ್ಮಿಕೊಂಡಿದ್ದ ‘ಜನವಿರೋಧಿ, ಜೀವವಿರೋಧಿ ಸರ್ಕಾರಗಳು ಅಧಿಕಾರದಿಂದ ತೊಲಗಲಿ’ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ವಿರೋಧಿ ನಿಲುವು ತಾಳಿದ್ದ ಬ್ರಿಟಿಷರ ವಿರುದ್ಧ ದೇಶದಾದ್ಯಂತ ಮಾಡು, ಇಲ್ಲವೆ ಮಡಿ ಹೋರಾಟ ಆರಂಭವಾಗಿತ್ತು. ಅದರ ಭಾಗವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಈಗಲೂ ದುಡಿಯುವ ಜನರಿಗೆ ಮಾರಕವಾಗಿರುವ ಇಂತಹ ಸರ್ಕಾರಗಳ ವಿರುದ್ಧ ಚಲೇಜಾವ್ ಚಳವಳಿ ರೀತಿಯ ಹೋರಾಟ ಆರಂಭಗೊಂಡಿದೆ ಎಂದು ವಿವರಿಸಿದರು.

ಬಿಜೆಪಿ ಮುಖಂಡರು 2014ರ ಲೋಕಸಭಾ ಚುನಾವಣೆಗೂ ಮುನ್ನ ಬೆಲೆ ಏರಿಕೆ ನಿಯಂತ್ರಣ, ರೈತರ ಆದಾಯ ದುಪ್ಪಟ್ಟು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ– ಹೀಗೆ ಹಲವು ಭರವಸೆ ನೀಡಿದ್ದರು. ಇದನ್ನು ನಂಬಿ ಯುವಜನರು ಮತ ನೀಡಿ, ಅಧಿಕಾರಕ್ಕೆ ತಂದರು. ಆದರೆ ಕಳೆದ 7 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಲಕ್ಷಾಂತರ ಕಂಪನಿಗಳು ಬಾಗಿಲು ಮುಚ್ಚಿವೆ ಎಂದು ದೂರಿದರು.

ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ, ಅಕ್ಕಿ, ಸಕ್ಕರೆ ಕೈಗೆಟುಕದಂತಾಗಿದೆ. ರಸಗೊಬ್ಬರ, ಬಿತ್ತನೆ ಬೀಜ ಮತ್ತಿತರ ಕೃಷಿ ಪೂರಕ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ರೈತರು ನಲುಗಿ ಹೋಗಿದ್ದಾರೆ. ಇಂತಹ ಆಡಳಿತ ನಮಗೆ ಬೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜನರ ಕಷ್ಟ ಅರ್ಥ ಮಾಡಿಕೊಳ್ಳದ ಸರ್ಕಾರಗಳನ್ನು ಅಧಿಕಾರದಿಂದ ತೊಲಗಿಸುವುದು ನಮ್ಮೆಲ್ಲ ಜವಾಬ್ದಾರಿ ಎಂದು ಹೇಳಿದರು.

ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರಗಳು ಸೋತಿದ್ದು, ಜನರು ನಲುಗಿ ಹೋಗಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗಲಿಲ್ಲ. ಖಾಸಗಿ ಆಸ್ಪತ್ರೆಗಳ ಬಿಲ್ ಭರಿಸಲಾಗದೆ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಸಾವಿರಾರು ಕುಟುಂಬಗಳು ಚಿಕಿತ್ಸೆಗೆ ಹಣ ಹೊಂದಿಸಲು ಮನೆ, ಮಠ ಕಳೆದುಕೊಂಡವು. ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದು ಇಡೀ ವ್ಯವಸ್ಥೆಯನ್ನು ಹಾಳು ಮಾಡಲಾಯಿತು ಎಂದು ಆರೋಪಿಸಿದರು.

ಕಳೆದ ಏಳು ವರ್ಷಗಳಲ್ಲಿ ಕೋಮುಗಲಭೆಗಳು ಹೆಚ್ಚಾಗಿದ್ದು, ಅಲ್ಪಸಂಖ್ಯಾತರು, ದಲಿತರು ಭಯದಲ್ಲಿ ಬದುಕುವಂತಾಗಿದೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳು ಜನರಿಗೆ ಮಾರಕವಾಗಿವೆ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಎಐಟಿಯುಸಿ ಜಿಲ್ಲಾ ಸಂಚಾಲಕ ಗಿರೀಶ್, ಕಾರ್ಯದರ್ಶಿ ಅಶ್ವಥ್ ನಾರಾಯಣ್, ಎಐಎಸ್‍ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ವಿ.ಲವ, ಮುಖಂಡರಾದ ಗೋವಿಂದರಾಜು, ವೆಂಕಟೇಶ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು