ಹೋರಾಟಗಾರರು ಸಂಸತ್ ಪ್ರವೇಶಿಸುವುದು ಅಗತ್ಯ: ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ

ಶುಕ್ರವಾರ, ಏಪ್ರಿಲ್ 26, 2019
35 °C
ಎಡಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ

ಹೋರಾಟಗಾರರು ಸಂಸತ್ ಪ್ರವೇಶಿಸುವುದು ಅಗತ್ಯ: ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ

Published:
Updated:
Prajavani

ತುಮಕೂರು: ಬಡತನ, ನಿರುದ್ಯೋಗ, ಆಹಾರ ಭದ್ರತೆಯಂತಹ ವಿಚಾರಗಳು ಸಂಸತ್ತಿನಲ್ಲಿ ಚರ್ಚೆ ಆಗಬೇಕು ಎಂಬ ಉದ್ದೇಶದಿಂದ ಜನಪರ ಹೋರಾಟಗಾರರನ್ನು ಎಡಪಕ್ಷಗಳು ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಿವೆ. ಕಾರ್ಮಿಕರು, ರೈತರು, ಹಿಂದುಳಿದ ವರ್ಗದವರು, ಯೋಜನಾ ನೌಕರರು ತುಮಕೂರು ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಮತ್ತು ಸಿಪಿಎಂ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿಗೆ ಇಂದು ಆಯ್ಕೆ ಆಗುತ್ತಿರುವವರಲ್ಲಿ ಬಹುತೇಕರು ಕೋಟ್ಯಧೀಶರು, ಉದ್ಯಮಿಗಳು ಆಗಿದ್ದಾರೆ. ಹೀಗಾಗಿಯೇ ಈ ದೇಶದ ರೈತರು, ಕಾರ್ಮಿಕರು, ಬಡವರು, ವಿದ್ಯಾವಂತ ಯುವ ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ನಡೆದಿಲ್ಲ ಎಂದರು.

ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವ ಜಾರಿಗೆ ಬರಬೇಕಾದರೆ ಎಡರಂಗದಿಂದ ಸ್ಪರ್ಧಿಸಿರುವ ತುಮಕೂರಿನ ಎನ್.ಶಿವಣ್ಣ, ಚಿಕ್ಕಬಳ್ಳಾಪುರದ ವರಲಕ್ಷ್ಮಿ, ಕನ್ನಯಕುಮಾರ್ ಅವರಂತಹ ಹೋರಾಟಗಾರರು ಸಂಸತ್ತಿಗೆ ಆಯ್ಕೆಯಾಗುವುದು ಅಗತ್ಯವಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ 43 ವಿವಿಧ ಯೋಜನೆಗಳಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮಹಿಳೆಯರು ದುಡಿಯುತ್ತಿದ್ದಾರೆ. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಖ್ಯೆಯೇ 27 ಲಕ್ಷ ಇದೆ. ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಈ ನೌಕರರಿಗೆ ನಯಾ ಪೈಸೆ ನೀಡಿಲ್ಲ. ಬದಲಿಗೆ ಯೋಜನೆ ಖಾಸಗೀಕರಣಕ್ಕೆ ಮುಂದಾಗುತ್ತಿದೆ ಎಂದು ದೂರಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿ, ಈ ಚುನಾವಣೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗಿಂತ, ವ್ಯಕ್ತಿಗತ ವಿಷಯಗಳು ಹೆಚ್ಚು ಚರ್ಚೆಯಾಗುತ್ತಿವೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಯುದ್ಧದಂತಹ ಚರ್ಚೆ ನಡೆಸುತ್ತಿದೆ. ನಿರುದ್ಯೋಗ ಸಮಸ್ಯೆ ಶೇ 7ರಷ್ಟು ಹೆಚ್ಚಾಗಿರುವುದು ವಿಪರ್ಯಾಸದ ಸಂಗತಿ ಎಂದರು.

ಕೆಎಸ್‌ಆರ್‌ಟಿಸಿ ನೌಕರರ ಸಂಘದ ರಾಜಶೇಖರ್, ಎಸ್‌ಯುಸಿಐನ ಕಲ್ಯಾಣಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಅಶ್ವತ್ಥನಾರಾಯಣ, ಕಂಬೇಗೌಡ, ಅಂಗನವಾಡಿ ನೌಕರರ ಒಕ್ಕೂಟದ ಫಾತಿಮಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !