ಕೊರಟಗೆರೆ: ಪಟ್ಟಣದ ಗಂಗಾಧರೇಶ್ವರ ಕೆರೆ ಏರಿ ಕೋಡಿ ಬಳಿಯ ತೂಬು ಬಿರುಕು ಬಿಟ್ಟು, ನೀರು ಪೋಲಾಗುತ್ತಿದ್ದ ಜಾಗದಲ್ಲಿ ಪಟ್ಟಣ ಪಂಚಾಯಿತಿಯಿಂದ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಯಿತು.
ಗಂಗಾಧರೇಶ್ವರ ಕೆರೆ ಪಟ್ಟಣಕ್ಕೆ ಜೀವಾಳವಾಗಿದೆ. ಕೆರೆ ಸುತ್ತುಮುತ್ತಲ ಐದು ಬೆಟ್ಟಗಳ ಮೇಲೆ ಬಿದ್ದ ಮಳೆ ನೀರು ಕೆರೆಯಲ್ಲಿ ಸಂಗ್ರಹವಾಗುತ್ತದೆ. ಪಟ್ಟಣದ ಅರ್ಧಭಾಗದ ಜನರ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ, ತೆರೆದ ಬಾವಿಗಳಿಗೆ, ಕಲ್ಯಾಣಿಗಳಿಗೆ ಈ ಕೆರೆ ಅಂತರ್ಜಲದ ಮೂಲವಾಗಿದೆ.
ದಿನಕ್ಕೆ ನೂರಾರು ದನಕರು, ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ, ಅಕ್ಕಪಕ್ಕದ ರೈತರ ಕೃಷಿ ಭೂಮಿಗೆ ಮೂಲಾಧಾರವಾಗಿದೆ. ಈಚೆಗೆ ಕೆರೆ ತೂಬಿನ ಬಳಿ ಬಿರುಕು ಬಿಟ್ಟು ನೀರು ಜಿನುಗುತ್ತಿತ್ತು. ಪಟ್ಟಣ ಪಂಚಾಯಿತಿಗೆ ಒಳಪಡುವ ಕೆರೆ ಇದಾದ್ದರಿಂದ ಸ್ಥಳೀಯರ ದೂರಿನ ಮೇರೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಿರುಕು ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಈ ಕೆರೆ ಅಭಿವೃದ್ಧಿ ಈವರೆಗೆ ಆಗಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಕೋಡಿ ಬಳಿ ಒಂದು ವಾರದಿಂದ ನೀರು ಪೋಲಾಗುತ್ತಿದ್ದರೂ ಯಾರೂ ತಲೆ ಹಾಕಿರಲಿಲ್ಲ. ತಹಶೀಲ್ದಾರರಿಗೆ ದೂರು ಸಲ್ಲಿಸಿದ ಮೇಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೆರೆ ಅಭಿವೃದ್ಧಿಪಡಿಸದಿದ್ದರೆ ಕುಡಿಯುವ ನೀರು ಸೇರಿದಂತೆ ರೈತರ ಕೃಷಿ ಭೂಮಿಗೆ ನೀರು ಇಲ್ಲವಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಕೆ. ಮಂಜುನಾಥ್ ಅವರಿಗೆ ಸ್ಥಳೀಯರು ದೂರಿದರು.
ಸ್ಥಳಕ್ಕೆ ಬಾರದ ಮುಖ್ಯಾಧಿಕಾರಿ: ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆ ತೂಬು ಬಳಿ ಬಿರುಕು ಬಿಟ್ಟು ಒಂದು ವಾರದಿಂದ ನೀರು ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಸಿಪಿಐ ಆರ್.ಪಿ. ಅನಿಲ್, ಕಂದಾಯ ಅಧಿಕಾರಿಗಳಾದ ಬಸವರಾಜು, ಪವನ್, ಪಟ್ಟಣ ಪಂಚಾಯಿತಿ ಅಧಿಕಾರಿಗಳಾದ ತುಳಸಿ, ಮಹಮದ್ ಹುಸೇನ್, ವೇಣುಗೊಪಾಲ್, ಶೈಲೇಂದ್ರ, ದೇವರಾಜು, ರೈತರಾದ ಕೋಟೆ ರಂಗನಾಥ್, ಶ್ರೀನಿವಾಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.