ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಲ್ಲಿ ಮತದಾರರ ಸಂಘ ರಚಿಸಿ

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ ಸೂಚನೆ
Last Updated 18 ಆಗಸ್ಟ್ 2019, 5:45 IST
ಅಕ್ಷರ ಗಾತ್ರ

ತುಮಕೂರು:ಜಿಲ್ಲೆಯ ಎಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ವಿವಿಧ ಕಾಲೇಜುಗಳ ಪ್ರಾಚಾರ್ಯರಿಗೆ ಸೂಚಿಸಿದರು.

ನಗರದ ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರಾಚಾರ್ಯರ ಸಭೆಯಲ್ಲಿ ಮಾತನಾಡಿದರು.

’ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೋಧಕರ ಮಾತನ್ನು ಬಹುಬೇಗ ಗ್ರಹಿಸಿ ಪಾಲನೆ ಮಾಡುವುದರಿಂದ ಪದವಿಪೂರ್ವ ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ’ ಹೇಳಿದರು.

18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಭಾರತ ಚುನಾವಣಾ ಆಯೋಗ ನೀಡಿದ ಮಾಹಿತಿಯನ್ವಯ ಶೇ.20ರಷ್ಟು ಮಾತ್ರ 18ರಿಂದ19 ವರ್ಷ ವಯಸ್ಸಿನವರು ಮತಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ. ಯುವಕರ ನೋಂದಣಿ ಪ್ರಮಾಣ ಶೇ 100ರಷ್ಟು ಆಗಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕಾಲೇಜು ಬಿಟ್ಟ ಮಕ್ಕಳಿಗೂ ಮತಪಟ್ಟಿಗೆ ನೋಂದಾಯಿಸಿಕೊಳ್ಳುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಜಿಲ್ಲೆಯಲ್ಲಿ ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪ್ರಾರಂಭವಾಗಿದ್ದು ದಿನಾಂಕ 2020ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಅರ್ಹರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಸ್ವಾಧ ಫೌಂಡೇಶನ್‌ನ ಪ್ರತಿನಿಧಿ ರಾಜೇಶ್ ಮಾತನಾಡಿ, ಧನ ಸಹಾಯ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಿಇಟಿ ಶುಲ್ಕ, ಮೂಲ ಸೌಲಭ್ಯ, ವಿದ್ಯಾರ್ಥಿನಿಲಯ ಸೌಲಭ್ಯ, ವ್ಯಾಸಂಗ ಶುಲ್ಕ, ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು’ ಎಂದರು.

’ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 5 ವರ್ಷಗಳ ಕಾಲ ಶಿಕ್ಷಣದೊಂದಿಗೆ ಫೌಂಡೇಶನ್ ವತಿಯಿಂದ ಕೌಶಲ ತರಬೇತಿಯನ್ನು ನೀಡಲಾಗುವುದು. ಕುಟುಂಬದ ವಾರ್ಷಿಕ ವರಮಾನ ₹ 1.5 ಲಕ್ಷಕ್ಕಿಂತ ಕಡಿಮೆ ಇರುವ ಹಾಗೂ 10ನೇ ತರಗತಿಯಲ್ಲಿ ಶೇ.80 ಅಂಕ ಪಡೆದಿರುವ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಪ್ರಾಚಾರ್ಯರು, ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಪಡೆಯಲು ತಿಳಿಸಬೇಕು’ ಎಂದು ಮನವಿ ಮಾಡಿದರು.

ಬೆಂಗಳೂರು ಉತ್ತರ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್‌ಕುಮಾರ್, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲಲಿತಾಕುಮಾರಿ, ಶ್ರೀನಿವಾಸ್, ಪ್ರಾಚಾರ್ಯರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಶಂಕರ್, ವಿವಿಧ ಕಾಲೇಜಿನ ಪ್ರಾಚಾರ್ಯರು ಇದ್ದರು.

ಸಿದ್ಧಗಂಗಾ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಬಸವರಾಜು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT