ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲ್ಟರ್ ಮರಳು ಘಟಕಗಳ ಮೇಲೆ ದಾಳಿ: ಅಧಿಕಾರಿಗಳಿಗೆ ಬೆದರಿಕೆ; ಲಾರಿ ವಶ

Last Updated 15 ಡಿಸೆಂಬರ್ 2018, 13:49 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಬಟ್ಲಹಳ್ಳಿ ಕಡೆಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಆಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿತು.

ಮರಳು ಫಿಲ್ಟರ್ ದಂಧೆ ನಡೆಸುತ್ತಿರುವವರು ಅಧಿಕಾರಿಗಳಿಗೆ ಪ್ರಾಣ ಬೆದರಿಕೆ ಹಾಕಿದರು. ಅಧಿಕಾರಿಗಳು ಇದಕ್ಕೆ ಜಗ್ಗದೆ ಮರಳು ಸಾಗಾಣಿಕೆ ಮಾಡುತ್ತಿದ್ದ ಒಂದು ಲಾರಿಯನ್ನು ವಶಪಡಿಸಿಕೊಂಡರು. ಮತ್ತೊಂದು ಲಾರಿ ಕತ್ತಲಿನಲ್ಲಿ ಸಾಗಿತು.

ಮುಂಗಾನಹಳ್ಳಿ ಹೋಬಳಿಯ ಕೋನಾಪುರ ಕೆರೆಯಲ್ಲಿ ಅಕ್ರಮ ಫಿಲ್ಟರ್ ಮರಳು ತಯಾರಿಕೆ ನಡೆಯುತ್ತಿದೆ. ದಿನ್ನಮಿಂದನಹಳ್ಳಿ ಕೆರೆ, ಕಾನಗಮಾಕಲಹಳ್ಳಿ ಕೆರೆ, ಸರ್ಕಾರಿ ಖರಾಬು ಹಾಗೂ ಹಿಡುವಳಿ ಜಮೀನುಗಳಲ್ಲೂ ವ್ಯಾಪಕವಾಗಿ ಅಕ್ರಮ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ ಎಂದು ದೂರು ಹಲವಾರು ಬಾರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.

ಶನಿವಾರ ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆಯಲ್ಲಿ ಅಕ್ರಮ ಫಿಲ್ಟರ್ ಘಟಕಗಳ ಪ್ರದೇಶಗಳನ್ನು ಜೆಸಿಬಿ ಮೂಲಕ ನಾಶಪಡಿಸಿದರು. ಮರಳನ್ನು ವಶಪಡಿಸಿಕೊಂಡರು.

ಶಿವಸ್ವಾಮಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹಾಗೂ ಬಟ್ಲಹಳ್ಳಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಬಹಿರಂಗವಾಗಿ ಮತ್ತು ವ್ಯಾಪಕವಾಗಿ ದಂಧೆ ನಡೆಯುತ್ತಿದ್ದರೂ ಏಕೆ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮರಳು ಸಾಗಾಣಿಕೆಯನ್ನು ನಿಷೇಧ ಮಾಡಲಾಗಿದೆ. ಆದರೂ ಕೆಲವರು ಸರ್ಕಾರಿ ಖರಾಬ್ ಮತ್ತು ಹಿಡುವಳಿ ಭೂಮಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಬಟ್ಲಹಳ್ಳಿಯಲ್ಲಿ ಕಾಯಂ ಸಬ್ ಇನ್‌ಸ್ಪೆಕ್ಟರ್ ಇಲ್ಲದಿರುವುದು ಸ್ವಲ್ಪ ಹಿನ್ನಡೆಯಾಗಿದೆ. ದಂಧೆ ಮುಂದುವರಿದರೆ ಬಟ್ಲಹಳ್ಳಿ ಠಾಣೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT