ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

7
ಮಾಜಿ ಮೇಯರ್ ಎಚ್.ರವಿಕುಮಾರ್ ಕೊಲೆ ಪ್ರಕರಣ, ತಪ್ಪಿಸಿಕೊಳ್ಳಲು ಆರೋಪಿ ಯತ್ನ

ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

Published:
Updated:
Deccan Herald

ತುಮಕೂರು: ಕಳೆದ ಭಾನುವಾರ ನಡೆದಿದ್ದ ಮಹಾನಗರ ಪಾಲಿಕೆ ಸದಸ್ಯ ಹಾಗೂ ಮಾಜಿ ಮೇಯರ್ ಎಚ್.ರವಿಕುಮಾರ್ ಅವರ ಕೊಲೆ ಪ್ರಕರಣದ ಆರೋಪಿ ರಾಜೇಶ್ ಕುಂದೂರು ಶನಿವಾರ ಮಧ್ಯಾಹ್ನ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲುಗಳಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆ ಕೃತ್ಯಕ್ಕೆ ಉಪಯೋಗಿಸಿದ ಲಾಂಗ್ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲು ಮಧ್ಯಾಹ್ನ 1.45ರ ಹೊತ್ತಿಗೆ ತುಮಕೂರು ನಗರದ ಹೊರ ವಲಯದ ವಸಂತನರಸಾಪುರ ಹತ್ತಿರದ ಲಿಂಗದಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು.

ಅರಣ್ಯದಲ್ಲಿ ಹೋಗುವಾಗ ಆರೋಪಿಯು ಕೋರಾ ಠಾಣೆ ‍ಪೊಲೀಸ್ ಮಂಜುನಾಥ್‌ನನ್ನು ಏಕಾಏಕಿ ತಳ್ಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೋರಾ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ರವಿಕುಮಾರ್ ಹಿಡಿದಾಗ ಅವರ ತಲೆ ಮೇಲೆ ಆರೋಪಿಯು ಕಲ್ಲನ್ನು ಎತ್ತಿ ಹಾಕಿದ್ದು, ಅವರು ಬಲ ಗೈ ಅಡ್ಡ ಹಿಡಿದಾಗ ಕಲ್ಲು ಕೈ ಮೇಲೆ ಬಿದ್ದು ಗಾಯಗೊಂಡಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ರಿವಾಲ್ವರ್‌ನ್ನು ಆರೋಪಿ ರಾಜೇಶ್ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ತನಿಖಾ ತಂಡದ ನೇತೃತ್ವವಹಿಸಿದ್ದ ತುಮಕೂರು ನಗರ ಡಿಎಸ್ಪಿ ಕೆ.ಎಸ್.ನಾಗರಾಜ್ ಅವರು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಆರೋಪಿ ಕಾಲುಗಳಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಗಾಯಗೊಂಡ ಸಬ್ ಇನ್‌ಸ್ಪೆಕ್ಟರ್ ರವಿಕುಮಾರ್ ಹಾಗೂ ಆರೋಪಿ ಇಬ್ಬರೂ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ವಿಚಾರಣೆ: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಬ್ ಇನ್‌ಸ್ಪೆಕ್ಟರ್ ರವಿಕುಮಾರ್ ಅವರ ಆರೋಗ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾ ರಾಣಿ ಅವರು ವಿಚಾರಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !