ಕಂಟೇನರ್ ಲಾರಿ ಮಾಲೀಕ, ಸಹಚರರಿಂದ ಚಾಲಕನ ಹತ್ಯೆ

7
ಶಿರಾ ನಗರ ಹೊರವಲಯದ ಹೆದ್ದಾರಿ ಪಕ್ಕ ನಡೆದ ಅಮಾನವೀಯ ಕೃತ್ತ, ಕಂಟೇನರ್‌ನಲ್ಲಿ ಎರಡು ದಿನ ಕೂಡಿ ಹಾಕಿ ಚಿತ್ರ ಹಿಂಸೆ

ಕಂಟೇನರ್ ಲಾರಿ ಮಾಲೀಕ, ಸಹಚರರಿಂದ ಚಾಲಕನ ಹತ್ಯೆ

Published:
Updated:
Deccan Herald

ಶಿರಾ: ಅಪಘಾತ ಮಾಡಿದ್ದಾರೆ ಎಂದು ಚಾಲಕರನ್ನು ಕಂಟೇನರ್ ಲಾರಿ ಮಾಲೀಕ ಹಾಗೂ ಆತನ ಸಹಚರರು ಥಳಿಸಿ, ಚಿತ್ರ ಹಿಂಸೆ ನೀಡಿದ್ದರಿಂದ ಒಬ್ಬ ಚಾಲಕ ಮೃತಪಟ್ಟಿದ್ದಾರೆ. ಇನ್ನೊಬ್ಬ ಚಾಲಕ ಗಾಯಗೊಂಡು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಕಡತನಾಳ್ ಗ್ರಾಮದ ಬಸಪ್ಪ ಬೇವಿನ್ (38) ಮೃತಪಟ್ಟ ಚಾಲಕ. ಅದೇ ಗ್ರಾಮದ ಸೋಮಪ್ಪ ಎಸ್.ನೇಸರಗಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ.

ಚಿತ್ರ ಹಿಂಸೆ ನೀಡಿ ಹತ್ಯೆಗೆ ಕಾರಣರಾದ ಆರೋಪಿಗಳಾದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಲಾರಿ ಮಾಲೀಕ ಬಾಳಪ್ಪ ಮಲ್ಲಪ್ಪ,  ಆತನ ಸಹಚರರಾದ ಪರಶುರಾಮ್ ಗೌಡಪ್ಪ ದಂಡಿನವರ್, ಪರಶುರಾಮ್ ಲಗುಮಪ್ಪ ಗೊರಲಿ, ಅಡಿವೆಪ್ಪ ಬಸಪ್ಪ ಗುಜನಾಳ ಮತ್ತು ಸಂತೋಷ್ ಶಿವಪ್ಪ ನವಕೋಡಿ ಅವರನ್ನು ಬಂಧಿಸಲಾಗಿದೆ ಎಂದು ಶಿರಾ ನಗರ ಠಾಣೆ ಇನ್‌ಸ್ಪೆಕ್ಟರ್ ರಂಗಶಾಮಯ್ಯ ತಿಳಿಸಿದ್ದಾರೆ.

ಘಟನೆಯ ವಿವರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರ ಶಿವಾಜಿನಗರದ ಬಳಿ ಮಂಗಳವಾರ (ಡಿ. 11) ಪುಣೆಯಿಂದ  ಬೆಂಗಳೂರಿಗೆ ಹೋಗುತ್ತಿದ್ದ ಕಂಟೇನರ್ ಮತ್ತು ಲಾರಿ ನಡುವೆ ಅಪಘಾತವಾಗಿತ್ತು.

ಅಪಘಾತದ ಬಗ್ಗೆ ಕಂಟೇನರ್ ಮಾಲೀಕ ಆರೋಪಿಯಾದ ಬಾಳಪ್ಪ ಅವರಿಗೆ ಕಂಟೇನರ್‌ ಚಾಲಕರಾದ ಬಸಪ್ಪ ಬೇವಿನ್ ಮತ್ತು ಸೋಮಪ್ಪ ಎಸ್.ನೇಸರಗಿ ಕರೆ ಮಾಡಿ ಮಾಹಿತಿ ನೀಡಿದ್ದರು. ನಾನು ಬರುವವರೆಗೂ ಪೊಲೀಸರಿಗೆ ದೂರು ನೀಡಬೇಡಿ. ಅಲ್ಲಿಯೇ ಇರುವಂತೆ ಕಂಟೇನರ್ ಮಾಲೀಕ ತಿಳಿಸಿದ್ದರು.

ತನ್ನ ಸಹಚರರೊಂದಿಗೆ ಬಂದ ಮಾಲೀಕ ಚಾಲಕನ ನಿರ್ಲಕ್ಷ್ಯದಿಂದ ಅಪಘಾತವಾಗಿದೆ ಎಂದು ಇನ್ನೊಬ್ಬ ಚಾಲಕನಿಂದ ದೂರು ಕೊಡಿಸಿ ವಾಹನವನ್ನು ಬುಧವಾರ ಬಿಡಿಸಿಕೊಂಡು ಹೋಗಿದ್ದರು.

ಹೋಗುವಾಗ ಶಿವಾಜಿನಗರ ಬಳಿಯೇ ಕಂಟೇನರ್ ನಿಲ್ಲಿಸಿ ಚಾಲಕರಿಬ್ಬರನ್ನೂ ವಾಹನದ ಮಾಲೀಕ ಮತ್ತು ಆತನ ಸಹಚರರು ಥಳಿಸಿ ಕಂಟೇನರ್‌ನಲ್ಲಿಯೇ ಕೂಡಿ ಹಾಕಿ ಹೋಗಿದ್ದರು. ಮೂರು ದಿನಗಳ ಕಾಲ ಅನ್ನ ಮತ್ತು ನೀರು ಕೊಡದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಬಂದು ನೋಡಿದಾಗ ಇಬ್ಬರೂ ಚಾಲಕರು ನಿತ್ರಾಣಗೊಂಡಿದ್ದರು.

ಈ ಸ್ಥಿತಿಯಲ್ಲಿಯೇ ಮತ್ತೆ ಮನಸೋ ಇಚ್ಛೆ ಥಳಿಸಿ ಅವರನ್ನು ಶಿರಾ ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆಗೆ ಸ್ಪಂದಿಸದೆ  ಬಸಪ್ಪ ಬೇವಿನ್ ಮೃತಪಟ್ಟಿದ್ದಾರೆ.

ಬಸಪ್ಪ ಬೇವಿನ್ ಮೃತ ಪಟ್ಟ ವಿಷಯ ತಿಳಿದು ಆರೋಪಿಗಳು ಪರಾರಿಯಾಗಿದ್ದರು. ಶಿರಾ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ರಂಗಶಾಮಯ್ಯ ತಿಳಿಸಿದ್ದಾರೆ.

ಹೆದ್ದಾರಿ ಪಕ್ಕ ಲಾರಿ, ಕಂಟೇನರ್, ಸರಕು ವಾಹನಗಳನ್ನು ಚಾಲಕರು ನಿಲ್ಲಿಸಿಕೊಂಡು ನಿಲ್ಲುವುದು, ವಿಶ್ರಾಂತಿ ಪಡೆದು ಮತ್ತೆ ತೆರಳುವುದು ಸಾಮಾನ್ಯ. ಹೀಗಾಗಿ, ಎರಡು ದಿನ ಕಂಟೇನರ್ ಒಂದೇ ಸ್ಥಳದಲ್ಲಿ ನಿಂತಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !