ಬುಧವಾರ, ಜೂನ್ 16, 2021
27 °C
ಆರೋಗ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್: ಎಲ್ಲೆಡೆ ಆತಂಕದ ವಾತಾವರಣ

ತುಮಕೂರು: ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ, ಎಲ್ಲಕ್ಕೂ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ತುಮಕೂರು: ನಗರದಲ್ಲಿ ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಅಧಿಕಾರಿಗಳು, ಪೊಲೀಸರು ಮುಂದೆ ನಿಂತು ಗುರುವಾರ ಅಂಗಡಿ ಮುಂಗಟ್ಟು ಮುಚ್ಚಿಸಿದ್ದರು. ಶುಕ್ರವಾರ ವರ್ತಕರು ಸ್ವಯಂ ಪ್ರೇರಿತರಾಗಿ ತಮ್ಮ ವಹಿವಾಟು ಬಂದ್ ಮಾಡಿದರು.

ತುಮಕೂರು ನಗರ, ತಾಲ್ಲೂಕು ಕೇಂದ್ರಗಳು ಹಾಗೂ ಜಿಲ್ಲೆಯ ಇತರ ನಗರ, ಪಟ್ಟಣ ಪ್ರದೇಶಗಳಲ್ಲಿ ಯಾವುದೇ
ಚಟುವಟಿಕೆಗಳು ಕಂಡುಬರಲಿಲ್ಲ. ಎಲ್ಲೆಡೆ ಆತಂಕದ ವಾತಾವರಣ ಮೂಡಿತ್ತು.

ನಗರದಲ್ಲಿ ಆಸ್ಪತ್ರೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು, ಕೆಲವು ಹೋಟೆಲ್‌ಗಳು ಮಾತ್ರ ತೆರೆದಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ತೆರೆದಿದ್ದರೂ ಜನಸಂಚಾರ ಇರಲಿಲ್ಲ. ಅಗತ್ಯ ಸೇವೆಗಳಿಗಷ್ಟೇ ಅವಕಾಶ ನೀಡಲಾಗಿತ್ತು. ಕೆಲವೆಡೆ ತರಕಾರಿ, ದಿನಸಿ ಅಂಗಳಿಗಳೂ ಮುಚ್ಚಿದ್ದವು. ಹೋಟೆಲ್‌ಗಳಲ್ಲಿ ಜನರು ತಿಂಡಿ, ಊಟವನ್ನು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು. ಮದ್ಯದಂಗಡಿ ಮುಂದೆ ದಟ್ಟಣೆ ಹೆಚ್ಚಾಗಿತ್ತು.

ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಎಂ.ಜಿ.ರಸ್ತೆ, ಶಿರಾಣಿ ರಸ್ತೆ, ಮಂಡಿಪೇಟೆ, ಗುಬ್ಬಿ ಗೇಟ್, ಸೋಮೇಶ್ವರಂ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳು ಬಿಕೊ ಎನ್ನುತ್ತಿದ್ದವು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣಗಳಲ್ಲೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಕಂಡುಬರಲಿಲ್ಲ. ಗುರುವಾರದಿಂದಲೇ ವಾಣಿಜ್ಯ ಚಟುವಟಿಕೆಗಳನ್ನು ಬಂದ್‌ ಮಾಡಿರುವುದು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆತಂಕಗೊಂಡಿರುವ ಜನರು ಮನೆಯಿಂದ ಹೊರ ಬರಲಿಲ್ಲ. ಅಗತ್ಯ ಹಾಗೂ ತುರ್ತು ಕೆಲಸ ಇದ್ದವರಷ್ಟೇ ಮನೆಯಿಂದ ಹೊರಗೆ ಬಂದರು.

ಬೆಳಿಗ್ಗೆ ಸ್ವಲ್ಪ ಮಟ್ಟಿಗೆ ಜನಸಂಚಾರ ಇತ್ತು. ಮಧ್ಯಾಹ್ನದ ವೇಳೆಗೆ ಈ ಪ್ರಮಾಣ ತಗ್ಗಿತು. ಸಂಜೆ ಹೊತ್ತಿಗೆ ಜನರ ಓಡಾಟ ತೀವ್ರವಾಗಿ ಕಡಿಮೆಯಾಗಿತ್ತು. ಬಿ.ಎಚ್.ರಸ್ತೆಯನ್ನು ಹೊರತುಪಡಿಸಿದರೆ ಉಳಿದೆಡೆ ವಾಹನ ಸಂಚಾರ ಕಡಿಮೆಯಾಗಿತ್ತು.

ವಾರಾಂತ್ಯದಲ್ಲಿ ಕರ್ಫ್ಯೂ ಜಾರಿ ಮಾಡಿದ್ದು, ಶನಿವಾರ, ಭಾನುವಾರ ಎರಡು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಶುಕ್ರವಾರ ಸಂಜೆ ವೇಳೆಗೆ ಪೊಲೀಸರು ಕರ್ಫ್ಯೂ ಜಾರಿ ಮಾಡಿದರು.

ನೌಕರರಿಗೂ ಕೋವಿಡ್: ಸರ್ಕಾರಿ ಕಚೇರಿಗಳಲ್ಲೂ ಸಾಕಷ್ಟು ನೌಕರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬ್ಯಾಂಕ್‌ಗಳ ಕೆಲವು ನೌಕರರಿಗೂ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದು, ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಕೆಲವು ನೌಕರರು ಭಯದಿಂದ ಕಚೇರಿಗಳತ್ತ ಬರಲಿಲ್ಲ. ಜನರೂ ಕಚೇರಿಗಳತ್ತ ಸುಳಿಯಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.