ಸೋಮವಾರ, ನವೆಂಬರ್ 18, 2019
22 °C

ಸೈಬರ್‌ ಅಪರಾಧಗಳ ಬಗ್ಗೆ ಜಾಗ್ರತರಾಗಿ

Published:
Updated:
Prajavani

ತುಮಕೂರು: ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ವಂಚಕರ ಆಮಿಷಕ್ಕೆ ಒಳಗಾಗಿ ಮೋಸ ಹೋಗುತ್ತಿರುವವ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾ ಪೊಲೀಸ್‌ ಕಚೇರಿಯು ಸುತ್ತೋಲೆ ಹೊರಡಿಸಿದೆ. 

ಸೈಬರ್‌ ವಂಚನೆ ಪ್ರಕರಣಗಳ ತನಿಖೆಗಾಗಿ ತುಮಕೂರು ನಗರದ ಕೋತಿತೋಪು ರಸ್ತೆಯಲ್ಲಿ ಸನ್ಮತಿ ಟ್ರೇಡರ್ಸ್‌ ಬಳಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ತೆರೆದಿದ್ದು, ವಂಚನೆಗೊಳಗಾದವರು ಈ ಠಾಣೆಯಲ್ಲಿ ದೂರು ನೀಡಬಹುದು.

ಈ ಕೆಳಕಂಡ ಅಂಶಗಳ ಬಗ್ಗೆ ಸಾರ್ವಜನಿಕರು ಜಾಗ್ರತರಾಗಿರಬೇಕು.

* ಬ್ಯಾಂಕ್‌ನ ಯಾವುದೇ ಅಧಿಕಾರಿಗಳು ಬ್ಯಾಂಕ್ ಮ್ಯಾನೇಜರ್‌ ಎಂದು ತಿಳಿಸಿ ನಿಮ್ಮ ಎಟಿಎಂ ಬ್ಲಾಕ್‌ ಆಗಿದೆ ಎಂದು ಫೋನ್ ಮಾಡಿ CARD NO/ CVV NO /OTP ಅನ್ನು ಪಡೆದು ಮೋಸ ಮಾಡುವವರ ಬಗ್ಗೆ ಎಚ್ಚರವಿರಲಿ. ಯಾರಿಗಾದರೂ ಯಾವುದೇ ಕಾರಣಕ್ಕೂ OTP ಅನ್ನು ನೀಡಬೇಡಿ.

* ಗೂಗಲ್‌ನಲ್ಲಿ ಮತ್ತು ಟ್ರೂ ಕಾಲರ್‌ನಲ್ಲಿ ಸಿಗುವ ಎಲ್ಲ ಮಾಹಿತಿಗಳು ನಿಜವೆಂದು ನಂಬಬೇಡಿ. ಗೂಗಲ್ ಪೇ, ಫೋನ್ ಪೇ ಇತ್ಯಾದಿಗಳ ಬಗ್ಗೆ ಅರಿವಿಲ್ಲದೇ ಹಣ ವರ್ಗಾವಣೆ ಮಾಡಬೇಡಿ.

* ಕ್ಲಬ್‌ಫ್ಯಾಕ್ಟರಿ ಮತ್ತಿತರೆ ವೆಬ್‌ಸೈಟ್‌ಗಳ ನಕಲಿ ಕಸ್ಟಮರ್‌ಕೇರ್ ನಂಬರ್‌ಗಳಿಗೆ ಕಾಲ್ ಮಾಡಿ ಮೋಸ ಹೋಗಬೇಡಿ.

* ಕ್ವಿಕ್ ವ್ಯೂವರ್/ ಕ್ವಿಕ್ ಸಪೋರ್ಟ್/ ಎನಿ ಡೆಸ್ಕ್ ಆ್ಯಪ್‌ಗಳನ್ನು ಅಪರಿಚಿತರು ಹೇಳಿದಂತೆ ಡೌನ್‌ಲೋಡ್ ಮಾಡಬೇಡಿ ಹಾಗೂ ಐ.ಡಿ. ನೀಡಬೇಡಿ.

* ಕೌನ್ ಬನೇಗಾ ಕರೋಡ್‌ಪತಿ/ ಭಾರಿ ಮೊತ್ತದ ಲಾಟರಿ/ ದಿನಪತ್ರಿಕೆ/ ಟಿವಿ ಮಾದ್ಯಮಗಳ ಮೂಲಕ ಜಾಹೀರಾತು ನೀಡಿ ಆಮಿಷಗಳ ಮೂಲಕ ಟ್ರಾನ್ಸ್‌ಪೋರ್ಟ್ ಫೀ, ಇತ್ಯಾದಿ ಫೀಗಳೆಂದು ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ವಂಚಕರಿಂದ ದೂರವಿರಿ.

* ಸುಲಭವಾಗಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಉದ್ಯೋಗ ಕೊಡಿಸುವುದಾಗಿ ಆನ್‌ಲೈನ್ ಮೂಲಕ ಉದ್ಯೋಗದ ಆಮಿಷವೊಡ್ಡಿ ವಂಚನೆ ಮಾಡುವವರಿದ್ದಾರೆ ಹುಷಾರಾಗಿರಿ.

* ಸೈನಿಕರ/ ಯೋಧರ ಹೆಸರಿನಲ್ಲಿ ಆನ್‌ಲೈನ್ ಮೂಲಕ OLX ಹಾಗೂ ಇತರೆ ವೆಬ್‌ಸೈಟ್‌ಗಳ ಮೂಲಕ ಕಡಿಮೆ ಬೆಲೆಗೆ ಬೈಕ್, ಕಾರು ಇತ್ಯಾದಿ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುವವರ ಬಗ್ಗೆ ಜಾಗರೂಕರಾಗಿ.

ಪ್ರತಿಕ್ರಿಯಿಸಿ (+)