ಕೊರಟಗೆರೆ: ‘ಎತ್ತಿನಹೊಳೆ ಯೋಜನೆಯಲ್ಲಿ ಭೂಸ್ವಾಧೀನ ಗೊಂಡಿರುವ ರೈತರ ಭೂಮಿಗೆ ಸಮನಾಂತರ ಬೆಲೆ ನೀಡುವುದರಿಂದ ತಪ್ಪಿಸಿಕೊಳ್ಳಲು ಯೋಜನೆಯ ಬಫರ್ ಡ್ಯಾಂ ಸ್ಥಳಾಂತರಿಸುವ ಹುನ್ನಾರ ನಡೆಸುತ್ತಿರುವ ಬಗ್ಗೆ ಮಾತು ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ಡ್ಯಾಂ ಸ್ಥಳಾಂತರಿಸಲು ಬಿಡದೇ ಯೋಜಿತ ಸ್ಥಳದಲ್ಲೆ ಡ್ಯಾಂ ನಿರ್ಮಾಣ ಮಾಡಬೇಕು. ರೈತರಿಗೆ ಸಿಗಬೇಕಾದ ನ್ಯಾಯಯುತ ಬೆಲೆ ನೀಡಬೇಕು. ಈ ವಿಚಾರವಾಗಿ ಹೋರಾಟಕ್ಕೂ ಸಿದ್ಧ’ ಎಂದು ಶಾಸಕ ಡಾ.ಜಿ. ಪರಮೇಶ್ವರ
ತಿಳಿಸಿದರು.
ತಾಲ್ಲೂಕಿನ ದಮಗನಯ್ಯನಪಾಳ್ಯ ಗ್ರಾಮದ ಮುತ್ತುರಾಯಸ್ವಾಮಿ ಮತ್ತು ವೆಂಕಟರವಣಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ 39 ಕೆರೆಗಳಿಗೆ ನೀರು ಹರಿಸುವ ಯೋಜನೆ ಕಾಮಗಾರಿಯು ತ್ವರಿತವಾಗಿ ಆಗಬೇಕಿದೆ. ಇದರಿಂದ ತಾಲ್ಲೂಕಿನ ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಕಾಮಗಾರಿ ಚುರುಕುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೈತ ಕುಟುಂಬದ ಮಹಿಳೆಯರಿಗೆ ವಿಶೇಷ ಯೋಜನೆಗಳ ಮೂಲಕ ಸವಲತ್ತುಗಳನ್ನು ನೀಡಿದರೆ ಅವರ ಜೀವನ ಆರ್ಥಿಕ ಭದ್ರತೆಯಿಂದ ಕೂಡಿರುತ್ತದೆ. ಗ್ರಾಮೀಣ ಭಾಗದ ಮಹಿಳೆಯರು ಸ್ತ್ರೀಶಕ್ತಿ ಸಂಘಗಳ ಮುಖಾಂತರ ಉಳಿತಾಯದ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ವ್ಯವಸಾಯದೊಂದಿಗೆ ಹೈನುಗಾರಿಕೆ ಮಾಡಿ ಆರ್ಥಿಕ ದೃಢತೆಯೊಂದಿಗೆ ಸಮಾಜದಲ್ಲಿ ಸ್ವಾವಲಂಬಿಗಳಾಗಿದ್ದಾರೆ. ಆದರೆ, ಬಯಲು ಸೀಮೆಯ ಭಾಗದ ರೈತರು ಮಳೆ ಆಶ್ರಿತ ಕೃಷಿಗೆ ಅವಲಂಬಿತರಾಗಿದ್ದಾರೆ. ಮಳೆ ಅಭಾವದಿಂದ ಮಾಡಿರುವ ಕೃಷಿ ಕೈಗತ್ತದೆ ಕೃಷಿ ಕುಂಠಿತವಾಗುತ್ತಿದೆ ಎಂದರು.
ದಮಗಲಯ್ಯನಪಾಳ್ಯ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕುಡಿಯವ ನೀರಿಗಾಗಿ ಹೇಮಾವತಿ ನೀರು ನೀಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ಸಮುದಾಯ ಭವನಕ್ಕೆ ₹ 10 ಲಕ್ಷ, ಶುದ್ಧನೀರಿನ ಘಟಕ, ಸ್ತ್ರೀ ಶಕ್ತಿ ಭವನ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸಲಾಗುವುದು. ಕ್ಷೇತ್ರದ ಎಲ್ಲಾ ಗ್ರಾಮಗಳ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಶ್ರಮ ಹಾಗೂ ಅನುದಾನ ಒದಗಿಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಮಾಜಿ ಅಧ್ಯಕ್ಷ ಟಿ.ಬಿ. ರಾಮಚಂದ್ರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಲ್. ಎಮ್ಮಂಜು, ಗೀತಮ್ಮ, ಕೋಕಿಲ ಸಂದೀಪ್, ವಕೀಲ ಕೃಷ್ಣಮೂರ್ತಿ, ಮುಖಂಡರಾದ ಚಂದ್ರಶೇಖರ ಗೌಡ, ಮಂಜುಳಾ ಆರಾದ್ಯ, ಹುಲೀಕುಂಟೆ ಪ್ರಸಾದ್, ಎಂಎನ್ಜೆ ಮಂಜು, ಮರುಗಪ್ಪ, ಮೂಡ್ಲಗಿರಿಯಪ್ಪ, ಮಂಜುನಾಥ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.