ಶುಕ್ರವಾರ, ಅಕ್ಟೋಬರ್ 18, 2019
27 °C
ನಗರದಲ್ಲಿ ಕಳೆಗಟ್ಟಿದ ಆಯುಧಪೂಜೆ ಮತ್ತು ವಿಜಯದಶಮಿ ಸಂಭ್ರಮ

ಮಾರುಕಟ್ಟೆಯಲ್ಲಿ ಜನಜಾತ್ರೆ: ಭರ್ಜರಿ ವ್ಯಾಪಾರ

Published:
Updated:
Prajavani

ತುಮಕೂರು: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮಾರುಕಟ್ಟೆಯಲ್ಲಿ ಭಾನುವಾರ ಮುಗಿಬಿದ್ದಿದ್ದರು. ಸಾಮಗ್ರಿಗಳ ದರದಲ್ಲಿ ಏರಿಕೆ ಇಲ್ಲದ ಕಾರಣ ಖರೀದಿಯ ಭರಾಟೆ ಜೋರಾಗಿತ್ತು.

ಅಂತರಸನಹಳ್ಳಿ ಮಾರುಕಟ್ಟೆಯ ಮಂಡಿಗಳು, ಜೆ.ಸಿ.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಬಿ.ಎಚ್‌.ರಸ್ತೆ, ಸೋಮೇಶ್ವರಪುರದ ವಾಣಿಜ್ಯ ಮಳಿಗೆಗಳಲ್ಲಿ ಗ್ರಾಹಕರ ದಂಡು ಕಂಡುಬಂದಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ವಹಿವಾಟು ಭರ್ಜರಿಯಾಗಿ ನಡೆಯಿತು.

ಹೂ, ಹಣ್ಣು, ಸಿಹಿ ತಿನಿಸು ಮತ್ತು ದಿನಸಿ ಸಾಮಗ್ರಿಗಳ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಪ್ರಮುಖ ರಸ್ತೆಗಳ ಬದಿಯಲ್ಲಿ ಬೂದುಗುಂಬಳ, ಬಾಳೆಕಂದು, ಮಾವಿನ ಸೊಪ್ಪು, ನಿಂಬೆಹಣ್ಣುಗಳನ್ನು ವರ್ತಕರು ಮಾರಾಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಂಡು ಬಡಾವಣೆಗಳಲ್ಲಿ ಮಾರಾಟ ಮಾಡಿದರು.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೂದುಗುಂಬಳಕ್ಕೆ ₹ 10, ₹ 10ಕ್ಕೆ ಮೂರು ನಿಂಬೆಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಬಾಳೆಕಂದುಗಳು ಗಾತ್ರಕ್ಕೆ ಅನುಗುಣವಾಗಿ ₹ 10ರಿಂದ ₹ 30ರ ವರೆಗೂ ಲಭ್ಯವಿದ್ದವು. ಮಾವಿನ ಸೊಪ್ಪು ₹ 10ಕ್ಕೆ ಒಂದು ಕಟ್ಟು ಸಿಗುತಿತ್ತು.

ಹೆಚ್ಚಳವಾಗದ ಬೆಲೆ ಏರಿಕೆಯಾಗದ ಲಾಭ: ಈ ವರ್ಷದಲ್ಲಿ ಈವರೆಗೂ ಆಚರಿಸಿದ ಹಬ್ಬಗಳ ಸಂದರ್ಭಕ್ಕೆ ಹೋಲಿಸಿದರೆ, ಸದ್ಯ ಹೂಗಳ ದರ ಗಣನೀಯವಾಗಿ ಹೆಚ್ಚಾಗಿಲ್ಲ. ಹಾಗಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬಿದ್ದಿಲ್ಲ. ವ್ಯಾಪಾರಿಗಳಿಗೂ ಗಣನೀಯ ಲಾಭ ಸಿಗುತ್ತಿಲ್ಲ ಎಂಬ ಮಾತು ಕೇಳಿಬಂದಿತು.

ಮಾರುಕಟ್ಟೆಯಲ್ಲಿ (ಪ್ರತಿ ಕೆ.ಜಿ.ಗೆ) ಮಾರಿಗೋಲ್ಡ್‌ ₹ 250, ಕಾಕಡ ₹ 600, ಸುಗಂಧರಾಜ ₹ 400, ಬಟನ್ಸ್‌ ಹೂ ₹ 200ಕ್ಕೆ ಮಾರಾಟವಾಗುತ್ತಿತ್ತು. ಪಚ್ಚೆ ಹೂ ₹ 50 (ಒಂದು ಮಾರು), ಚಾಂದನಿ ₹ 50, ಬಟನ್ಸ್‌ ₹ 50 (ಮಾರು) ನಿಗದಿಯಾಗಿತ್ತು. ಸೇವಂತಿಯ ಒಂದು ಕುಚ್ಚು (10 ಮಾರು) ₹ 1,900 ಇತ್ತು. ಹೂವಿನ ಹಾರಗಳಿಗೆ ₹ 50 ಇತ್ತು.

ತೆಂಗಿನ ಕಾಯಿಗಳು ಗಾತ್ರಕ್ಕೆ ಅನುಗುಣವಾಗಿ ₹ 15 ರಿಂದ ₹ 30ರ ವರೆಗೆ ಬಿಕರಿಯಾಗುತಿದ್ದವು.

Post Comments (+)