ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ 16ರ ಸಂಜೆ ಬಹಿರಂಗ ಪ್ರಚಾರ ಅಂತ್ಯ, ಗಡುವು ಮೀರಿದರೆ ಕ್ರಮ

ರಾಜಕೀಯ ಪಕ್ಷಗಳ ಅಭಯರ್ಥಿಗಳು, ಮುಖಂಡರು, ಕಾರ್ಯಕರ್ತರಿಗೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸೂಚನೆ
Last Updated 11 ಏಪ್ರಿಲ್ 2019, 17:47 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಪ್ರಿಲ್18ರಂದು ಚುನಾವಣೆ ನಡೆಯಲಿದ್ದು, ಮತದಾನ ದಿನದ 48 ಗಂಟೆಗಳ ಮುನ್ನ ಅಂದರೆ ಏಪ್ರಿಲ್ 16ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.

ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗಮನಿಸಬೇಕು. ಚುನಾವಣಾ ಬಹಿರಂಗ ಪ್ರಚಾರದ ಗಡುವು ಮುಕ್ತಾಯದ ನಂತರ ಯಾವುದೇ ರಾಜಕೀಯ ಪಕ್ಷಗಳು, ಉಮೇದುವಾರರು, ಕಾರ್ಯಕರ್ತರು ಅಥವಾ ಇತರರು ಯಾವುದೇ ಬಹಿರಂಗ ಚುನಾವಣಾ ಪ್ರಚಾರ ನಡೆಸತಕ್ಕದ್ದಲ್ಲ. ಗಡುವು ಮುಕ್ತಾಯದ ನಂತರ ಬಹಿರಂಗ ಪ್ರಚಾರ ಕೈಗೊಂಡಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ 2 ವರ್ಷಗಳ ಶಿಕ್ಷೆ ಅಥವಾ ದಂಡ ಅಥವಾ ಎರಡರಿಂದಲೂ ಶಿಕ್ಷಿಸಲ್ಪಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯವಾದ ಗಡುವಿನ ನಂತರ ಅಂದರೆ ಏಪ್ರಿಲ್ 16ರ ಸಂಜೆ 6 ಗಂಟೆಯ ನಂತರ ತುಮಕೂರು ಲೋಕಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಈ ಲೋಕಸಭಾ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಮತದಾರರಲ್ಲದ ಹೊರಗಿನ ರಾಜಕೀಯ ಕಾರ್ಯಕರ್ತರು, ಮುಖಂಡರು ಬಹಿರಂಗ ಪ್ರಚಾರದ ಗಡುವು ಮುಕ್ತಾಯದ ನಂತರ ಲೋಕಸಭಾ ಕ್ಷೇತ್ರವನ್ನು ಬಿಡಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರಿಗೆ ಲೋಕಸಭಾ ಕ್ಷೇತ್ರವನ್ನು ಬಿಡುವಂತೆ ತಿಳುವಳಿಕೆ ನೀಡಬೇಕು. ಚುನಾವಣಾ ಬಹಿರಂಗ ಪ್ರಚಾರದ ಅಂತಿಮ ಗಡುವಿನ ನಂತರ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರು ಲೋಕಸಭಾ ಕ್ಷೇತ್ರದ ಒಳಗಡೆ ಇದ್ದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ಬಸ್ ವ್ಯವಸ್ಥೆ
‘ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ತಾಲ್ಲೂಕು ಕೇಂದ್ರಸ್ಥಾನದ ಸ್ಥಳಗಳಿಂದ ನೇಮಕ ಮಾಡಿದ ವಿಧಾನಸಭಾ ಕ್ಷೇತ್ರಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿ ನೇಮಕ ಮಾಡಿದ ವಿಧಾನಸಭಾ ಕ್ಷೇತ್ರಗಳಿಗೆ ಕಳುಹಿಸಿ ಕೊಡಲು ಏಪ್ರಿಲ್ 17 ರಂದು ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಆಯಾ ತಾಲ್ಲೂಕು ಕೇಂದ್ರಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.

ವಿಧಾನಸಭಾ ಕ್ಷೇತ್ರವಾರು ಬಸ್ಸುಗಳು ಹೊರಡುವ ಸ್ಥಳದ ವಿವರ: ತುಮಕೂರು ಗ್ರಾಮಾಂತರ ಕ್ಷೇತ್ರ : ವಿಜಯನಗರದ ಸರ್ವೋದಯ ಬಾಲಕಿಯರ ಪ್ರೌಢಶಾಲೆ, ತುಮಕೂರುನಗರ ಕ್ಷೇತ್ರ : ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಗುಬ್ಬಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ: ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ತಿಪಟೂರು:ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ತುರುವೇಕೆರೆ:ಸರ್ಕಾರಿ ಪದವಿಪೂರ್ವ ಕಾಲೇಜು, ಕುಣಿಗಲ್:ಮಹಾತ್ಮಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜು, ಕೊರಟಗೆರೆ:ಸರ್ಕಾರಿ ಪದವಿಪೂರ್ವ ಕಾಲೇಜು, ಶಿರಾ: ಸರ್ಕಾರಿ ಪ್ರಥಮದರ್ಜೆ ಕಾಲೇಜು, ಜ್ಯೋತಿ ನಗರ, ಪಾವಗಡ: ಸರ್ಕಾರಿ ಪದವಿಪೂರ್ವ ಕಾಲೇಜು.ಮಧುಗಿರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ನಿಯೋಜಿತ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಸಕಾಲಕ್ಕೆ ಹಾಜರಾಗಿ ಚುನಾವಣಾ ಕರ್ತವ್ಯಕ್ಕೆ ತೆರಳಬೇಕು ಎಂದು ಸೂಚಿಸಿದ್ದಾರೆ.

ಏಪ್ರಿಲ್ 18ರಂದು ಸಾರ್ವತ್ರಿಕ ರಜೆ ಘೋಷಣೆ
ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳ ಎಲ್ಲಾ ರಾಜ್ಯ ಸರ್ಕಾರಿ ಕಚೇರಿ, ಶಾಲಾ,ಕಾಲೇಜು(ಅನುದಾನಿತ ಶಿಕ್ಷಣ ಸಂಸ್ಥೆಗಳನ್ನೊಳಗೊಂಡಂತೆ), ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆ, ಔದ್ಯಮಿಕ ಸಂಸ್ಥೆ, ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ.

ಅಲ್ಲದೇ, ಏಪ್ರಿಲ್ 18ರಂದು (ನೆಗೊಷಿಯೇಬಲ್ ಇನ್‌ಸ್ಟ್ರೂಮೆಂಟ್ ಆ್ಯಕ್ಟ್–1881ರ ಪ್ರಕಾರ) ಸಾರ್ವತ್ರಿಕ ರಜೆ ಎಂದು ಘೋಷಿಸಲಾಗಿದೆ. ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT