ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

ಸೂಪರ್ ಸೀಡ್ ಕ್ರಮಕ್ಕೆ ವಿರೋಧ, ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಿದ ನೌಕರರು; ಪರಮೇಶ್ವರ, ರೇವಣ್ಣ ವಿರುದ್ಧ ಘೋಷಣೆ
Last Updated 22 ಜುಲೈ 2019, 14:15 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೂಪರ್ ಸೀಡ್ ಮಾಡಿರುವುದನ್ನು ಖಂಡಿಸಿ ಬ್ಯಾಂಕಿನ ನೌಕರರ ಯೂನಿಯನ್ ನೇತೃತ್ವದಲ್ಲಿ ನೌಕರರು ಸೋಮವಾರ ನಗರದ ಪ್ರಧಾನ ಕಚೇರಿ ಸೇರಿದಂತೆ ಜಿಲ್ಲೆಯಲ್ಲಿರುವ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ನೌಕರರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 10ರಿಂದ 10.20ರವರೆಗೆ ಪ್ರತಿಭಟನೆ ನಡೆಸಿದ ನೌಕರರು ಬಳಿಕ ಕಪ್ಪು ಪಟ್ಟಿ ಧರಿಸಿಕೊಂಡು ಇಡೀ ದಿನ ಕೆಲಸ ಮಾಡಿದರು.

ಪ್ರಧಾನ ಕಚೇರಿ ಮುಂದೆ ನೂರಾರು ನೌಕರರು ಪ್ರತಿಭಟನೆ ಮಾಡಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಘೋಷಣೆ ಕೂಗಿದರು.

ಯೂನಿಯನ್ ಕಾರ್ಯದರ್ಶಿ ಮಧುಸೂದನ್ ಮಾತನಾಡಿ, 'ನಮ್ಮ ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅಕ್ರಮಗಳು ನಡೆದಿಲ್ಲ. ವಿನಾಕಾರಣ ಸೂಪರ್ ಸೀಡ್ ಮಾಡಲಾಗಿದೆ. ರಾಜಕೀಯ ದ್ವೇಷದಿಂದ ಸೂಪರ್ ಸೀಡ್ ಮಾಡಲಾಗಿದೆ. ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕು. ಆಡಳಿತ ಮಂಡಳಿಗೆ ಮತ್ತೆ ಅಧಿಕಾರವಹಿಸಿ ಕೊಡಬೇಕು’ ಎಂದು ಒತ್ತಾಯ ಮಾಡಿದರು.

‘ಗ್ರಾಹಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನಮ್ಮ ಪ್ರತಿಭಟನೆ ಮಾಡಿದ್ದೇವೆ. ಕಪ್ಪು ಪಟ್ಟಿ ಧರಿಸಿಕೊಂಡು ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ‘ಹದಿನೈದು ವರ್ಷದಲ್ಲಿ ಇಡೀ ರಾಜ್ಯದಲ್ಲಿಯೇ ಯಾವ ಡಿಸಿಸಿ ಬ್ಯಾಂಕ್ ಮಾಡದ ಸಾಧನೆಯನ್ನು ನಮ್ಮ ಡಿಸಿಸಿ ಬ್ಯಾಂಕ್ ಮಾಡಿದೆ. ರೈತರು, ಬಡವರು, ಅಸಹಾಯಕರು, ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಮಾಡಿ ಏಳಿಗೆಗೆ ಸಹಕಾರಿಯಾಗಿದೆ. ನಿವೃತ್ತ ನೌಕರರ ಹಿತರಕ್ಷಣೆಗೆ ವಾರ್ಷಿಕ ₹ 35 ಲಕ್ಷ ಕಾಯ್ದಿರಿಸಿ ತನ್ನದೇ ಆದ ವಿಶೇಷ ಯೋಜನೆ ಮೂಲಕ ಬ್ಯಾಂಕಿನ ಆಡಳಿತ ಮಂಡಳಿ ನೆರವಾಗಿದೆ. ಇದನ್ನು ಸಹಿಸದೇ ರಾಜಕೀಯ ಕಾರಣಕ್ಕೆ ಸೂಪರ್ ಸೀಡ್ ಮಾಡಲಾಗಿದೆ’ ಎಂದು ಆರೋಪಿಸಿದರು.

ಯೂನಿಯನ್ ಮುಖಂಡರಾದ ಲಕ್ಷ್ಮಯ್ಯ, ಚಂದು, ನರೇಂದ್ರ, ರೇಣುಕೇಶ್ ಹಾಗೂ ಬ್ಯಾಂಕಿನ ನಿವೃತ್ತ ನೌಕರರು ಪ್ರತಿಭಟನೆಯಲ್ಲಿದ್ದರು.

ಮನವಿ ಸಲ್ಲಿಕೆ: ಸೂಪರ್ ಸೀಡ್ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ನೌಕರರ ಯೂನಿಯನ್ ಪದಾಧಿಕಾರಿಗಳು ಕಾರ್ಯದರ್ಶಿ ಮಧುಸೂದನ್ ನೇತೃತ್ವದಲ್ಲಿ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT