ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿಗೊಂದು ವಿಎಸ್‌ಎಸ್‌ಎನ್

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್.ರಾಜಣ್ಣ ಪುನರಾಯ್ಕೆ
Last Updated 19 ಸೆಪ್ಟೆಂಬರ್ 2020, 14:29 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್.ರಾಜಣ್ಣ ಐದನೇ ಬಾರಿ ಪುನರಾಯ್ಕೆ ಆಗಿದ್ದಾರೆ. ಡಿಸಿಸಿ ಬ್ಯಾಂಕ್ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಉಪಾಧ್ಯಕ್ಷರಾಗಿ ಜಿ.ಜೆ.ರಾಜಣ್ಣ ಆಯ್ಕೆಯಾಗಿದ್ದಾರೆ. ಶನಿವಾರ ಎಲ್ಲ ನಿರ್ದೇಶಕರು ಸೇರಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

‘ಜಿಲ್ಲೆಯಲ್ಲಿ 341 ಗ್ರಾಮ ಪಂಚಾಯಿತಿಗಳಿವೆ. ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಈಗಾಗಲೇ 234 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವಿಎಸ್‌ಎಸ್‌ಎನ್‌) ಕಾರ್ಯನಿರ್ವಹಿಸುತ್ತಿವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಬ್ಯಾಂಕ್ ಶಾಖೆ ತೆರೆಯುವ ಗುರಿ ಇದೆ. ಉಳಿದ ಪಂಚಾಯಿತಿಗಳಲ್ಲಿಯೂ ವಿಎಸ್‌ಎಸ್‌ಎನ್‌ಗಳನ್ನು ಆರಂಭಿಸಲಾಗುವುದು’ ಎಂದು ಕೆ.ಎನ್.ರಾಜಣ್ಣ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೋಬಳಿಗೆ ಒಂದರಂತೆ ಬ್ಯಾಂಕ್‌ಗಳನ್ನೂ ತೆರೆಯಲಾಗುವುದು. ಈಗಾಗಲೇ ನಾಲ್ಕು ಸಾವಿರ ಜನ ಬೀದಿ ಬದಿ ವ್ಯಾಪಾರಿಗಳಿಗೆ ₹3.45 ಕೋಟಿ ಸಾಲ ನೀಡಿದ್ದೇವೆ. ₹ 70 ಕೋಟಿಗೂ ಹೆಚ್ಚು ಚಿನ್ನಾಭರಣ ಸಾಲ ನೀಡಿದ್ದೇವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಕ್ಷಾತೀತ ಮತ್ತು ಜಾತ್ಯತೀತವಾಗಿ ಆಯ್ಕೆ ನಡೆದಿದೆ. ಈ ಆಯ್ಕೆಗೆ ಸಹಕರಿಸಿದ ಎಲ್ಲ ಪಕ್ಷಗಳ ಮುಖಂಡರು ಮತ್ತು ಸಹಕಾರಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಎಲ್ಲ ಜಾತಿಯ ಬಡವರಿಗೆ ಮತ್ತು ರೈತರಿಗೆ ಬ್ಯಾಂಕ್‌ನಿಂದ ಅನುಕೂಲ ಕಲ್ಪಿಸಲಾಗುವುದು. ಧ್ವನಿ ಇಲ್ಲದವರ ಪರವಾಗಿ ಪ್ರಮುಖವಾಗಿ ಕೆಲಸ ಮಾಡಲಾಗುವುದು. ಎಲ್ಲ ರೈತರಿಗೂ ಸಾಲ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದರು.

ಹೈನುಗಾರಿಕೆ ಸೇರಿದಂತೆ ಉಪಕಸುಬುಗಳನ್ನು ಮಾಡುವವರಿಗೂ ಸಾಲ ನೀಡಲು ಯೋಜಿಸಲಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಸರ್ಕಾರದ ಬಂಡವಾಳ ಇಲ್ಲ. ಠೇವಣಿದಾರರು, ಸಹಕಾರಿಗಳು, ನಬಾರ್ಡ್ ಸಾಲದಿಂದ ಬೆಳವಣಿಗೆಯನ್ನು ಕಾಣುತ್ತಿದೆ. ಸಹಕಾರ ಸಂಘಗಳ ಸಾಲ ಎಂದರೆ ಸರ್ಕಾರದ್ದು ಎನ್ನುವ ಮನೋಭಾವ ಇದೆ. ಆದರೆ ನಾವು ನಬಾರ್ಡ್ ನೀಡುವ ಹಣಕ್ಕೆ ಬಡ್ಡಿಯನ್ನು ಕಟ್ಟುತ್ತೇವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಹಾಗೂ ನಿರ್ದೇಶಕರು ಗೋಷ್ಠಿಯಲ್ಲಿ ಹಾಜರಿದ್ದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನ ಬೇಡ

‘ಶಿರಾ ಉಪಚುನಾವಣೆಯಲ್ಲಿ ನಾನು ಪಕ್ಷ ಹೇಳಿದವರ ಪರವಾಗಿ ಕೆಲಸ ಮಾಡುವೆ. ಎಲ್ಲರೂ ಸೇರಿ ಕಾಂಗ್ರೆಸ್ ಗೆಲುವಿಗೆ ಪ್ರಯತ್ನಿಸುತ್ತೇವೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ’ ಎಂದು ರಾಜಣ್ಣ ಸ್ಪಷ್ಟಪಡಿಸಿದರು.

‘ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾನೂ ಟವೆಲ್ ಹಾಕಿದ್ದೆ. ಆದರೆ ಟವೆಲ್‌ ಅನ್ನು ಪಕ್ಕಕ್ಕೆ ಸರಿಸಿದ್ದಾರೆ ನಮ್ಮ ನಾಯಕ ಸಿದ್ದರಾಮಯ್ಯ. ಅವರು ನಿಲುವುಗಳಿಗೆ ಬದ್ಧ’ ಎಂದರು.

ಉಚ್ಚಾಟನೆ ವಾಪಸ್

ಮಧುಗಿರಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮಧುಗಿರಿ ಪಟ್ಟಣ ಘಟಕದ ಅಧ್ಯಕ್ಷ ಎಸ್‌.ಆರ್.ಶ್ರೀನಿವಾಸ್ ಅವರ ಉಚ್ಚಾಟನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಪಸ್ ಪಡೆದಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ವಿರುದ್ಧ ಈ ಇಬ್ಬರು ಕೆಲಸ ಮಾಡಿದ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ರಾಜಣ್ಣ ಅವರ ಬೆಂಬಲಿಗರಾದ ಈ ಇಬ್ಬರ ಉಚ್ಚಾಟನೆಯ ಆದೇಶವನ್ನು ಶಿರಾ ಉಪಚುನಾವಣೆಯ ಹೊಸ್ತಿಲಿನಲ್ಲಿ ಕೆಪಿಸಿಸಿ ಅಧ್ಯಕ್ಷರು ವಾಪಸ್ ಪಡೆದಿದ್ದಾರೆ. ಶಿವಕುಮಾರ್ ಅವರನ್ನು ರಾಜಣ್ಣ ಇತ್ತೀಚೆಗೆ ಭೇಟಿಮಾಡಿದ್ದರು.

ಡಿಸಿಸಿ ಮೇಲೆ ರಾಜಣ್ಣ ‍ಪ್ರಾಬಲ್ಯ

ನಿರೀಕ್ಷೆಯಂತೆಯೇ ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಪುನರಾಯ್ಕೆ ಆಗಿದ್ದಾರೆ. ಐದನೇ ಬಾರಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಅವರು ಬ್ಯಾಂಕ್ ಮೇಲೆ ಪ್ರಬಲ ಹಿಡಿತ ಹೊಂದಿದ್ದಾರೆ ಎನ್ನುವುದನ್ನು ಇದು ಸ್ಪಷ್ಟವಾಗಿ ಎತ್ತಿ ತೋರುತ್ತದೆ. ಅಲ್ಲದೆ ಉಪಾಧ್ಯಕ್ಷರಾಗಿ ತಮ್ಮ ಬೆಂಬಲಿಗ ಜಿಲ್ಲಾ ಪಂಚಾಯಿತಿ ಸದಸ್ಯರೂ ಆದ ಜಿ.ಜೆ.ರಾಜಣ್ಣ ಆಯ್ಕೆಯಾಗುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT