ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
Last Updated 10 ಮಾರ್ಚ್ 2023, 15:24 IST
ಅಕ್ಷರ ಗಾತ್ರ

ತುಮಕೂರು: ಕೊಬ್ಬರಿ ಬೆಂಬಲ ಬೆಲೆಯನ್ನು ಕನಿಷ್ಠ ₹20 ಸಾವಿರಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಬಿಜಿಎಸ್‌ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಶೋಕ ರಸ್ತೆಯ ಮುಖಾಂತರ ಸ್ವಾತಂತ್ರ್ಯದ ಚೌಕದ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್‍ಯಾಲಿ ನಡೆಯಿತು. ನೂರಾರು ಸಂಖ್ಯೆಯ ರೈತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

ಅಡಿಕೆ, ಕೊಬ್ಬರಿ, ಇತರೆ ಎಣ್ಣೆ ಪದಾರ್ಥಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ರೈತರಿಗೆ ಕನಿಷ್ಠ 10 ಗಂಟೆಗಳ ಕಾಲ ವಿದ್ಯುತ್‌ ಪೂರೈಸಬೇಕು ಎಂದು ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಲಕ್ಷಾಂತರ ರೈತ ಕುಟುಂಬಗಳು ತೆಂಗು ಬೆಳೆ ನಂಬಿ ಜೀವನ ಸಾಗಿಸುತ್ತಿವೆ. ವಾಣಿಜ್ಯ ಬೆಳೆಯಾಗಿ ಅಡಿಕೆಯನ್ನೂ ಬೆಳೆಯುತ್ತಿದ್ದಾರೆ. ಆದರೆ, ಸರ್ಕಾರ ಈ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ರೈತರನ್ನು ಬೀದಿಗೆ ತಂದಿದೆ ಎಂದು ಕಿಡಿಕಾರಿದರು.

ರಸಗೊಬ್ಬರ, ಪೆಟ್ರೋಲ್‌, ಡೀಸೆಲ್‌ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಕೃಷಿ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತಿದೆ. ರೈತರ ಉತ್ಪನ್ನಗಳಿಗೆ ಮಾತ್ರ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸರ್ಕಾರದ ಕಾಯ್ದೆ, ಕಾನೂನುಗಳಿಂದ ಕೃಷಿ ಭೂಮಿ ಬಂಡವಾಳದಾರರ ಪಾಲಾಗುತ್ತಿದೆ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಕ್ವಿಂಟಲ್‌ ಕೊಬ್ಬರಿ ಬೆಲೆ ₹19 ಸಾವಿರದಿಂದ ₹9 ಸಾವಿರಕ್ಕೆ ಇಳಿಕೆ ಕಂಡಿದೆ. ಮಾಡಿದ ಸಾಲ ತೀರಿಸಲು ಆಗದೆ ರೈತರು ಆತ್ಮಹತ್ಯೆಯತ್ತ ದೃಷ್ಟಿ ನೆಡುತ್ತಿದ್ದಾರೆ. ಸರ್ಕಾರಗಳು ಕಾರ್ಪೊರೇಟ್‌ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆ’ ಎಂದು ದೂರಿದರು.

ರೈತ ಸಂಘದ ಪದಾಧಿಕಾರಿಗಳಾದ ಶಂಕರಪ್ಪ, ನೂಲೆನೂರು ಶಂಕರಪ್ಪ, ಕೆ.ಎನ್‌. ವೆಂಕಟೇಗೌಡ, ಚಿಕ್ಕಬೋರೇಗೌಡ, ದೊಡ್ಡಮಾಳಯ್ಯ, ರವೀಶ್, ಚಿಕ್ಕಣ್ಣ, ಸಿ.ಜಿ.ಲೋಕೇಶ್, ಭಾಗ್ಯಮ್ಮ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT