ತುಮಕೂರು: ಮಹಾನಗರ ಪಾಲಿಕೆ ಆಯುಕ್ತರು ಕರೆ ಸ್ವೀಕರಿಸುವುದಿಲ್ಲ. ಕಚೇರಿಗೆ ಹೋದರೆ ಭೇಟಿಗೆ ಅವಕಾಶ ಸಿಗುವುದಿಲ್ಲ. ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು? ಎಂದು ನಗರದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕುವೆಂಪು ನಗರದ ನೇತಾಜಿ ಪಾರ್ಕ್‌ನಲ್ಲಿ ಶನಿವಾರ ಪಾಲಿಕೆಯಿಂದ ಹಮ್ಮಿಕೊಂಡಿದ್ದ 19, 20, 21ನೇ ವಾರ್ಡ್ ವ್ಯಾಪ್ತಿಯ ಜನಸ್ಪಂದನ ಸಭೆಯಲ್ಲಿ ಈ ಭಾಗದ ಜನರು ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ತೋಡಿಕೊಂಡರು. ಪಾಲಿಕೆಯ ಸದಸ್ಯರು ಚುನಾವಣೆಯ ನಂತರ ಮತ್ತೆ ಕಾಣಿಸಿಕೊಳ್ಳುವುದಿಲ್ಲ. ಅಧಿಕಾರಿಗಳಿಗೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ನಮ್ಮ ಸಮಸ್ಯೆ ಕೇಳುವವರು ಯಾರು ಎಂದು ವೆಂಕಟೇಶ್, ಮಲ್ಲೇಶಯ್ಯ ಇತರರು ಪ್ರಶ್ನಿಸಿದರು.
ಮುಖಂಡ ಮಲ್ಲೇಶಯ್ಯ, ‘ಶಾರದಾ ದೇವಿ ನಗರದಲ್ಲಿ ಕಳೆದ 15 ವರ್ಷಗಳಿಂದ ಹಾಳಾದ ರಸ್ತೆ ಸರಿಪಡಿಸಿಲ್ಲ. ಸ್ಮಾರ್ಟ್ ಸಿಟಿಯಡಿ ವಾರ್ಡ್ ಆಯ್ಕೆಯಾಗಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಕೇವಲ ನಾಮಕಾವಸ್ಥೆಗೆ ಕೆಲಸ ಮಾಡುತ್ತಿದ್ದಾರೆ. ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದು, ರಸ್ತೆ ಗುಂಡಿಗಳಿಂದ ತುಂಬಿಕೊಂಡಿದೆ. ಕೆಲವರು ತಮ್ಮ ಮನೆಗಳ ಮುಂದೆ ಮಣ್ಣು ಹಾಕಿ ಗುಂಡಿ ಮುಚ್ಚಿದ್ದಾರೆ. ತೆರೆದ ಚರಂಡಿ ಮುಚ್ಚಿಲ್ಲ. ಜಿಲ್ಲಾ ಕ್ರೀಡಾಂಗಣದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಶುರು ಮಾಡಬೇಕು. ಇಲ್ಲಿ ಒಂದು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಒತ್ತಾಯಿಸಿದರು.
‘ವಿದ್ಯಾವಾಹಿನಿ ಕಾಲೇಜು ಬಳಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಐದಡಿ ಅಗಲದ ಕಾಲುವೆ ಮಾಯವಾಗಿದೆ. ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕುವೆಂಪು ನಗರದ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಇಲ್ಲಿ ವಾಹನ ನಿಲ್ಲಿಸದಂತೆ ಕ್ರಮ ವಹಿಸಬೇಕು’ ಎಂದು ನಟರಾಜಪ್ಪ ಮನವಿ ಮಾಡಿದರು.
‘ಸೊಳ್ಳೆ, ನಾಯಿಗಳ ಕಾಟ ಹೆಚ್ಚಾಗಿದ್ದು, ಫಾಗಿಂಗ್ ಮಾಡಿಸುತ್ತಿಲ್ಲ. ಖಾಲಿ ಜಾಗದಲ್ಲಿ ಗಿಡಗಳು ಬೆಳೆದು ಹಾವು, ಹೆಗ್ಗಣಗಳು ಜಾಸ್ತಿಯಾಗಿವೆ. ನಾಯಿಗಳ ಹಾವಳಿಯಿಂದ ಮಕ್ಕಳು ಮನೆಯಿಂದ ಆಚೆ ಬರಲು ಹಿಂಜರಿಯುತ್ತಿದ್ದಾರೆ. ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಹೊರ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸೌಮ್ಯಾ, ರಮ್ಯಾ ಅಸಮಾಧಾನ ವ್ಯಕ್ತಪಡಿಸಿದರು.
‘ಈಗಾಗಲೇ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬೀದಿ ನಾಯಿ ನಿಯಂತ್ರಣಕ್ಕೆ ಬರಲಿವೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ವೀರೇಶ್ ಕಲ್ಮಠ್ ಮಾಹಿತಿ ನೀಡಿದರು.
ಪಾಲಿಕೆಯ ಮಾಜಿ ಸದಸ್ಯರಾದ ಲಲಿತಾ ರವೀಶ್, ಶ್ರೀನಿವಾಸ್ ಹಾಜರಿದ್ದರು.
ನಿಮ್ಮ ಸಮಸ್ಯೆ ಕೇಳಿ ಬರೆದುಕೊಂಡು ಹೋಗಲು ಸಭೆ ಮಾಡುತ್ತಿಲ್ಲ. ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದುಬಿ.ವಿ.ಅಶ್ವಿಜ ಆಯುಕ್ತರು ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.