ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಪರಿವರ್ತಕಕ್ಕೆ ಹಣದ ಬೇಡಿಕೆ: ತಾ.ಪಂ. ಅಧ್ಯಕ್ಷರ ತರಾಟೆ

ಮಧುಗಿರಿ: ಕೆಡಿಪಿ ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ತರಾಟೆ
Last Updated 11 ಜೂನ್ 2020, 3:58 IST
ಅಕ್ಷರ ಗಾತ್ರ

ಮಧುಗಿರಿ: ವಿದ್ಯುತ್ ಪರಿವರ್ತಕಗಳಿಗಾಗಿ ರೈತರಿಂದ ಹಣ ಕೇಳಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ಆರೋಪಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ವಿದ್ಯುತ್ ಪರಿವರ್ತಕಗಳಿಗಾಗಿ ರೈತರನ್ನು ಕಚೇರಿಗೆ ಅಲೆಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿಗೆ ಅವರು ಸೂಚಿಸಿದರು.

ಕುಡಿಯುವ ನೀರು ಸರಬರಾಜಿಗೆ ಕೊಳವೆ ಬಾವಿಗೆ ವಿದ್ಯುತ್ ನೀಡಬೇಕು. ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದ್ದು, ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.

ಬಿತ್ತನೆಗೆ ಜೊಳ್ಳು ಶೇಂಗಾ ನೀಡಲಾಗುತ್ತಿದೆ ಎಂಬ ದೂರುಗಳಿವೆ. ಶೇಂಗಾ ವಿತರಣೆ ಮಾಡುವಾಗ ಕೃಷಿ ಅಧಿಕಾರಿಗಳು ಕಡ್ಡಾಯವಾಗಿ ಇರುವಂತೆ ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಅವರಿಗೆ ಸೂಚಿಸಿದರು.

ಅರಣ್ಯ ಇಲಾಖೆಯಿಂದ ನೀಡಲಾಗುವ ಸೋಲಾರ್ ವಾಟರ್ ಹೀಟರ್ ಹಾಗೂ ದೀಪಗಳ ಫಲಾನುಭವಿಗಳ ಪಟ್ಟಿ ತಯಾರಿಸುವಾಗ ಜಿ.ಪಂ ಹಾಗೂ ತಾ.ಪಂ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಶಾಸಕರು ನೀಡಿದ ಪಟ್ಟಿಯನ್ನು ಮಾತ್ರ ಪರಿಗಣಿಸಲಾಗಿದೆ. ಫಲಾನುಭವಿಗಳಿಗೆ ಶಾಸಕರು ತಮ್ಮ ಸ್ವಂತ ಹಣದಿಂದ ವಸ್ತುಗಳನ್ನು ನೀಡುತ್ತಿಲ್ಲ. ಸರ್ಕಾರದ ಸೌಲಭ್ಯ ಅರ್ಹರಿಗೆ ತಲುಪಿಸಲು ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ತಾ.ಪಂ.ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ವಲಯ ಅರಣ್ಯಾಧಿಕಾರಿ ವಾಸದೇವ ಮೂರ್ತಿ ಅವರಿಗೆ ಸೂಚಿಸಿದರು.

ಮುಂದೆ ಹೀಗಾಗದಂತೆ ಎಚ್ಚರವಹಿಸುವುದಾಗಿ ಅರಣ್ಯಾಧಿಕಾರಿ ಪ್ರತಿಕ್ರಿಯಿಸಿದರು.

ಸಂಜೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಆಂದ್ರ ಗಡಿಭಾಗದ ಹಳ್ಳಿಗಳಲ್ಲಿರುವ ಮದ್ಯಪ್ರಿಯರು ಗಡಿದಾಟಿ ಬರುತ್ತಿದ್ದಾರೆ. ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಅಧ್ಯಕ್ಷರು ಒತ್ತಾಯಿಸಿದರು. ಅಕ್ರಮ ಮದ್ಯ‌ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅಬಕಾರಿ ನಿರೀಕ್ಷಕಿ ಶ್ರೀಲತಾ ತಿಳಿಸಿದರು. ಉಪಾಧ್ಯಕ್ಷ ಲಕ್ಷ್ಮೀನ ರಸಪ್ಪ,ಆರೋಗ್ಯಾಧಿಕಾರಿ ಡಾ. ರಮೇಶಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ.ರಾಜು, ಇಒ ದೊಡ್ಡಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT