ತುರುವೇಕೆರೆ: ಕೊಬ್ಬರಿ ಕ್ವಿಂಟಲ್‌ಗೆ ₹25 ಸಾವಿರ ಬೆಂಬಲ ಬೆಲೆ ನೀಡವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಯಿಂದ ಗುರುವಾರ ಕರೆನೀಡಿದ್ದ ತುರುವೇಕೆರೆ ಬಂದ್ ಯಶಸ್ವಿಯಾಯಿತು.
ಬೆಳಿಗ್ಗೆ 6 ಗಂಟೆಯಿಂದಲೇ ಪೆಟ್ರೋಲ್ ಬಂಕ್, ಹಾಲಿನ ಅಂಗಡಿ, ಔಷಧಿ ಅಂಗಡಿ, ಬ್ಯಾಂಕ್, ಶಾಲೆ, ಕಾಲೇಜು, ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಅಂಗಡಿ ಮಾಲೀಕರು, ವರ್ತಕರು ಸ್ವಯಂ ಪ್ರೇರಿತರಾಗಿ ಮುಚ್ಚಿದ್ದರು.
ಸರ್ಕಾರಿ ಬಸ್, ಆಟೊ, ಬೈಕ್, ಇನ್ನಿತರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು. ಪಟ್ಟಣದ ಸಾರ್ವಜನಿಕರ ಕಚೇರಿಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ರೈತ ಸಂಘ ಹಾಗೂ ವಿವಿಧ ಸಂಘಟನೆ ಮುಖಂಡರು ಪಟ್ಟಣದ ಎಪಿಎಂಸಿ ಕಚೇರಿಯಿಂದ ಮೆರವಣಿಗೆ ತೆರಳಿ ಬಾಣಸಂದ್ರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಬ್ಬರಿಗೆ ₹25 ಸಾವಿರ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಅವರಿಗೆ ಮನವಿ ನೀಡಿದರು.
ರೈತ ಸಂಘದ ಅಧ್ಯಕ್ಷ ಕೋಡೀಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದ ಕೃಷಿ ಬೆಲೆ ಆಯೋಗ ಕೊಬ್ಬರಿಗೆ ₹17,800 ನಿಗದಿ ಮಾಡಲಾಗಿದೆ ಎಂದು ವರದಿ ನೀಡಿದೆ. ಆದರೆ ರಾಜ್ಯ ಸರ್ಕಾರ ಕೇವಲ ₹1,250 ಬೆಂಬಲ ಬೆಲೆಯಾಗಿ ಘೋಷಿಸಿದ್ದು ಯಾವ ಮಾನದಂಡದಲ್ಲಿ ಎನ್ನುವುದು ಅರ್ಥವಾಗುತ್ತಿಲ್ಲ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದು ಕೂಡಲೇ ರಾಜ್ಯ ಸರ್ಕಾರ ₹5 ಸಾವಿರ ಹಾಗೂ ಕೇಂದ್ರ ಸರ್ಕಾರ ₹5 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ 12 ಜಿಲ್ಲೆಗಳಲ್ಲಿ ತೆಂಗು ಬೆಳೆಯುತ್ತಿದ್ದು, 12 ಜಿಲ್ಲೆಯ ಸಂಸದರು, ಶಾಸಕರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ, ಕೇಂದ್ರ ಸರ್ಕಾರಕ್ಕೆ ನಿಯೋಗದ ಮೂಲಕ ತೆರಳಿ ತೆಂಗು ಉತ್ಪಾದನಾ ಆಮದು ಶುಲ್ಕವನ್ನು ಶೇ 30ರಿಂದ ಶೇ 50ಕ್ಕೆ ಏರಿಕೆ ಮಾಡಿದರೆ ಕೊಬ್ಬರಿ ಬೆಲೆ ₹30ರಿಂದ ₹40 ಸಾವಿರಕ್ಕೆ ಏರಿಕೆ ಆಗಲಿದೆ ಎಂದರು.
ಮುಖಂಡ ಶಾಂತಕುಮಾರ್ ಮಾತನಾಡಿ, ಜಿಲ್ಲೆಯಲ್ಲೇ ಹೆಚ್ಚು ತೆಂಗು ಬೆಳೆಯುವ ರೈತರಿದ್ದಾರೆ. ಈಗ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದು ರೈತರು ಸಂಕಷ್ಟದಲ್ಲಿದ್ದಾರೆ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅದ್ಯಕ್ಷ ಆನಂದ್ ಪಟೇಲ್, ಗೌರವಾಧ್ಯಕ್ಷ ಆರಾಧ್ಯ, ತಾಲ್ಲೂಕು ಅಧ್ಯಕ್ಷ ನಾಗೇಂದ್ರ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಕಸಾಪ ಸಂಘದ ಅಧ್ಯಕ್ಷ ಡಿ.ಪಿ.ರಾಜು, ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಆಟೊ ಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ಸಿಐಟಿಯು ಕಾರ್ಯದರ್ಶಿ ಸತೀಶ್, ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್, ಪ್ರಗತಿಪರ ರೈತ ಅರಳೀಕೆರೆ ತಿಮ್ಮಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.