ಮಂಗಳವಾರ, ಜೂಲೈ 7, 2020
27 °C
ಮಾಸಾಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಬೇಸರ

ಡೆಂಗಿ ಹೆಚ್ಚಳಕ್ಕೆ ಉದಾಸೀನವೇ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಡೆಂಗಿ, ಚಿಕುನ್‌ಗುನ್ಯಾ, ಮಲೇರಿಯಾ, ನಿಫಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲು ನಮ್ಮಲ್ಲಿರುವ ಉದಾಸೀನ ಮನೋಭಾವವೇ’ ಕಾರಣ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಆಶ್ರಯದಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿ ಬುಧವಾರ ನಡೆದ ಡೆಂಗಿ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡೆಂಗಿ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ರೋಗ ಹರಡದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆ ಇದೆ. ಆದರೂ ಉದಾಸೀನ ನಡವಳಿಕೆ ತೋರುತ್ತಿದ್ದಾರೆ. ರೋಗ ತಗುಲಿದಾಗ ವಾಸಿ ಮಾಡುವುದಕ್ಕಿಂತ ರೋಗ ಹರಡದಂತೆ ನಿಯಂತ್ರಿಸುವುದೇ ಬಹುಪಾಲು ಮೇಲು ಎಂದು ಹೇಳಿದರು. ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರಪಾಲಿಕೆ ಆಯುಕ್ತ ಭೂಬಾಲನ್, ನಗರವನ್ನು ಸೊಳ್ಳೆ ಮುಕ್ತ ಹಾಗೂ ಡೆಂಗಿ ಮುಕ್ತವನ್ನಾಗಿ ಮಾಡುವಲ್ಲಿ ಪಾಲಿಕೆಯು ದಿಟ್ಟ ಹೆಜ್ಜೆ ಇಟ್ಟಿದೆ. ನಾಗರಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮನೆಯ ಒಳಗಿನ ಹಾಗೂ ಸುತ್ತಮುತ್ತಲಿರುವ ನೀರಿನ ಸಂಗ್ರಹ ಹಾಗೂ ಘನತ್ಯಾಜ್ಯ ವಸ್ತುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ ಹರಡುತ್ತದೆ. ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದ ಈ ಜ್ವರ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕಂಡು ಬರುತ್ತಿರುವುದು ಆತಂಕಕಾರಿ ವಿಷಯ ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಎನ್.ಪುರುಷೋತ್ತಮ್ ಮಾತನಾಡಿ, ‘2019ರ ಜನವರಿಯಿಂದ ಇಲ್ಲಿಯವರೆಗೆ ತುಮಕೂರು ತಾಲ್ಲೂಕು 14, ಕೊರಟಗೆರೆ 5, ಪಾವಗಡ 2, ಗುಬ್ಬಿ 2, ತಿಪಟೂರು 4 ಹಾಗೂ ಇತರ ಕಡೆಗಳಲ್ಲಿ 3 ಸೇರಿದಂತೆ 30 ಡೆಂಗಿ ಪ್ರಕರಣಗಳು ವರದಿಯಾಗಿವೆ’ ಎಂದು ಹೇಳಿದರು.

ಡೆಂಗಿ, ಚಿಕುನ್‌ಗುನ್ಯಾ ಅಪಾಯಕಾರಿ ಕಾಯಿಲೆಗಳಾಗಿವೆ. ಪ್ರಪಂಚದಾದ್ಯಂತ ಬಹುವೇಗವಾಗಿ ಸೊಳ್ಳೆಯಿಂದ ಹರಡುತ್ತಿದೆ. ಈ ಡೆಂಗಿ ಜ್ವರವು 150 ವರ್ಷದ ಹಳೆಯ ಕಾಯಿಲೆ ಆಗಿದ್ದರೂ ಕಳೆದ 30 ವರ್ಷಗಳಲ್ಲಿ 30 ಪಟ್ಟು ಹೆಚ್ಚಿರುವುದು ಅಪಾಯಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಟಿ.ನಾಗೇಶ್ ಕುಮಾರ್, ಜಿಲ್ಲಾ ಆರೋಗ್ಯ ವಿಚಕ್ಷಣಾಧಿಕಾರಿ ಅಧಿಕಾರಿ ಡಾ.ಆರ್‌.ವಿ.ಮೋಹನ್‌ದಾಸ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಡಾ.ಎಂ.ರಜನಿ, ಆಯುಷ್ ಅಧಿಕಾರಿ ಡಾ.ಸಂಜೀವ್ ಮೂರ್ತಿ ಇದ್ದರು.

ಕಾರ್ಯಕ್ರಮದಲ್ಲಿ ಡೆಂಗಿ ಮತ್ತು ಚಿಕುನ್‌ಗುನ್ಯಾ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು, ಸ್ವಚ್ಛತೆ ಕಾಪಾಡುವಿಕೆ, ಪರಿಸರ ನೈರ್ಮಲ್ಯ, ಡೆಂಗಿ ರೋಗವನ್ನು ಹರಡುವ ಈಡೀಸ್ ಸೊಳ್ಳೆಯ ಜೀವನ ಕ್ರಮ, ಮನೆಯಲ್ಲಿ ಸೊಳ್ಳೆ ನಿಯಂತ್ರಣ ಕುರಿತಂತೆ ವಿವಿಧ ಶಾಲಾ ಮಕ್ಕಳು ವಸ್ತುಪ್ರದರ್ಶನ ಏರ್ಪಡಿಸಿದ್ದರು.

ಪ್ರದರ್ಶನದಲ್ಲಿ ಸದಾಶಿವ ನಗರದ ಬೈರವೇಶ್ವರ ಪ್ರೌಢಶಾಲೆ, ರಾಘವೇಂದ್ರ ನಗರದ ನಳಂದ ಶಾಲೆ, ವಿದ್ಯಾನಿಕೇತನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ, ಅತ್ತಿಮಬ್ಬೆ ವಿದ್ಯಾಮಂದಿರ, ವಾಸವಿ ವಿದ್ಯಾಪೀಠ, ಭಾರತ್ ಮಾತಾ ಆಂಗ್ಲ ಮಾಧ್ಯಮ ಶಾಲೆಗಳು ಪಾಲ್ಗೊಂಡಿದ್ದವು.

ಇದಕ್ಕೂ ಮುನ್ನ ಡೆಂಗಿ ಜಾಗೃತಿ ಜಾಥಾಕ್ಕೆ ಪ್ರೊ.ಸಿದ್ದೇಗೌಡ ಚಾಲನೆ ನೀಡಿದರು. ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು