ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೆರೆಯಲ್ಲಿ ನೀರಿಲ್ಲ, ಇಲಾಖೆಗೆ ನಷ್ಟ ತಪ್ಪಿಲ್ಲ

ಹರಾಜು ಪ್ರಕ್ರಿಯೆಯಲ್ಲಿ ಹೊಂದಾಣಿಕೆ; ಮೀನುಗಾರಿಕೆ ಇಲಾಖೆಗೆ ₹ 1 ಕೋಟಿ ನಷ್ಟ
Last Updated 11 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ತುಮಕೂರು: ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 400 ಕೆರೆಗಳು ಇವೆ. ಇವುಗಳಲ್ಲಿ 167 ಕೆರೆಗಳಲ್ಲಿ ನೀರಿಲ್ಲ. ಈ ಕಾರಣದಿಂದ ಅಂದಾಜು ₹1 ಕೋಟಿಯಷ್ಟು ಹಣ ಈ ವರ್ಷ ಇಲಾಖೆಗೆ ನಷ್ಟವಾಗಿದೆ.

ಜಿಲ್ಲೆಯಲ್ಲಿ ಒಟ್ಟು 1,632 ಕೆರೆಗಳಿವೆ. ಅದರಲ್ಲಿ 40 ಹೆಕ್ಟೇರ್‌ಗಿಂತ ಕಡಿಮೆ ಇರುವ 1,232 ಕೆರೆಗಳು ಗ್ರಾಮ ಪಂಚಾಯಿತಿಯ ಸುಪರ್ದಿನಲ್ಲಿವೆ. 40 ಹೆಕ್ಟೇರ್‌ ವ್ಯಾಪ್ತಿಗಿಂತ ಹೆಚ್ಚಿರುವ 400 ಕೆರೆಗಳು ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ. ಇದರಲ್ಲಿ 233 ಕೆರೆಗಳು ಮಾತ್ರ ಮತ್ಸ್ಯ ಪಾಲನೆಗೆ ಯೋಗ್ಯವಾಗಿವೆ. 167 ಮಳೆ ನೀರು ಸಂಗ್ರಹವಾಗದ ನಿರೀಕ್ಷಿತ ಆದಾಯ ಇಲಾಖೆಯ ಕೈ ಸೇರಿಲ್ಲ.

400 ಕೆರೆಗಳೂ ಭರ್ತಿಯಾಗಿದ್ದರೆ ಈ ವರ್ಷ ₹2 ಕೋಟಿಗೂ ಅಧಿಕ ಆದಾಯ ಇಲಾಖೆ ಕೈ ಸೇರುತ್ತಿತ್ತು. ಆದರೆ, ಮಳೆ ಅಭಾವದ ಕಾರಣ ಹಲವು ಕೆರೆಗಳಲ್ಲಿ ನೀರಿಲ್ಲ. ಪ್ರಸ್ತುತ ವರ್ಷ ₹1,37,18,740 ಆದಾಯ ಇಲಾಖೆ ಕೈ ಸೇರಿದೆ.

201 ಕೆರೆಗಳಿಗೆ ಹರಾಜು: ಮೀನುಗಾರರ ಕುಟುಂಬಗಳು ಹಾಗೂ ಮೀನು ಸಾಕಾಣಿಕೆ ಸ್ವಸಹಾಯ ಸಂಘಗಳ ಅಭಿವೃದ್ಧಿಯೇ ಇಲಾಖೆಯ ಮುಖ್ಯ ಉದ್ದೇಶ. 300 ಹೆಕ್ಟೇರ್‌ಗಿಂತ ಹೆಚ್ಚಿರುವ 32 ಕೆರೆಗಳನ್ನು ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ. ಉಳಿದಂತೆ 201 ಕೆರೆಗಳನ್ನು ಟೆಂಡರ್‌ ಮತ್ತು ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲಾಗಿದೆ.

ಹೊಂದಾಣಿಕೆಯಿಂದ ನಷ್ಟ: ಇಲಾಖೆ ನೀತಿ ಪ್ರಕಾರ ಹೆಚ್ಚು ಹರಾಜು ಕೂಗುವ ವ್ಯಕ್ತಿಗಳಿಗೆ ಕೆರೆಗಳನ್ನು ನೀಡಲಾಗುತ್ತಿದೆ. ಆದರೆ ಅನೇಕರು ಹರಾಜು ಕೂಗುವ ಮುನ್ನವೇ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹರಾಜು ಕೂಗಬೇಕು ಎಂದು ಬರುವವರ ಮನವೊಲಿಸಿ, ಇಂತಿಷ್ಟು ಹಣ ನೀಡಿ ಹರಾಜಿನಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಕೂಡ ಆದಾಯ ಕುಂಠಿತಕ್ಕೆ ಕಾರಣ ಎಂಬುದು ಇಲಾಖೆ ಅಧಿಕಾರಿಗಳ ವಾದ.

ಪ್ರಸ್ತುತ 32 ಗುತ್ತಿಗೆ ನೀಡಿರುವ ಕೆರೆಗಳಿಂದ ₹14,13,026, ಟೆಂಡರ್‌ ಮತ್ತು ಹರಾಜು ಪ್ರಕ್ರಿಯೆ ನಡೆದ 201 ಕೆರೆಗಳಿಂದ ₹ 1,20,62,714 ಹಾಗೂ 81 ಜನರಿಗೆ ನೀಡಿರುವ ಪರವಾನಗಿಯಿಂದ ₹ 2,43,000 ಇಲಾಖೆ ಬೊಕ್ಕಸ ಸೇರಿದೆ.

ಉತ್ಪಾದನಾ ಕೇಂದ್ರಗಳ ಕೊರತೆ: ಜಿಲ್ಲೆಯಲ್ಲಿ ಮೀನು ಉತ್ಪಾದನಾ ಕೇಂದ್ರಗಳ ಕೊರತೆ ಎದ್ದು ಕಾಣುತ್ತಿದೆ. ಕುಣಿಗಲ್‌ ತಾಲ್ಲೂಕಿನ ಮಾರ್ಕೊನಹಳ್ಳಿಯಲ್ಲಿ ಮಾತ್ರವೇ ಏಕೈಕ ಮೀನು ಉತ್ಪಾದನಾ ಕೇಂದ್ರವಿದೆ. ಉಳಿದಂತೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕೊರಟಗೆರೆ, ಶಿರಾ, ಮಧುಗಿರಿ ಮತ್ತು ಗುಬ್ಬಿಯಲ್ಲಿ ಮೀನು ಪರಿಪಾಲನಾ ಕೇಂದ್ರಗಳಿವೆ.

ಇಲ್ಲಿಗೆ ಹೊರ ಜಿಲ್ಲೆ, ರಾಜ್ಯಗಳಿಂದ ಮೀನುಮರಿಗಳನ್ನು ತರಿಸಲಾಗುತ್ತಿದೆ. ಇದರಿಂದ ಖರ್ಚು ಸಹ ಹೆಚ್ಚಾಗುತ್ತಿದೆ. ಪ್ರಸ್ತುತ 233 ಕೆರೆಗಳಲ್ಲಿ 1.85 ಕೋಟಿ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರಗಳಲ್ಲಿ 39 ಲಕ್ಷ ಮರಿಗಳನ್ನು ಬಿತ್ತನೆ ಮಾಡಲಾಗಿದೆ.

ಆನ್‌ಲೈನ್‌ ಟೆಂಡರ್‌ ಪ್ರಕ್ರಿಯೆ ನಡೆಸಿದರೆ ಇಲಾಖೆಗೆ ಆದಾಯ ವೃದ್ಧಿಯಾಗಲಿದೆ. ಇಲ್ಲಿ ಎಲ್ಲ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುತ್ತವೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಭಾವಿಗಳ ಕೈವಾಡ ತಪ್ಪಲಿದೆ. ಯಾರು ಅಧಿಕ ಟೆಂಡರ್‌ಗೆ ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಕೆರೆ ವಿಲೇವಾರಿ ಮಾಡಲು ಅನುಕೂಲವಾಗಲಿದೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರ್ ತಿಳಿಸಿದರು.

ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಪ್ರಸ್ತುತ 45 ಹುದ್ದೆಗಳ ಪೈಕಿ 20 ಜನರಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT